ಸೋಮವಾರಪೇಟೆ ತಾಲೂಕಿನ ತಾಕೇರಿ ಸಮುದಾಯ ಭವನದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮವನ್ನು ಕೊಡ್ಲಿಪೇಟೆ ಕಲ್ಲಹಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು. ಸುಬ್ರಾಯ ನಂದೋಡಿ, ಶಿವಕುಮಾರ್, ಮುತ್ತಣ್ಣ, ವಿಮಲಾ ಇದ್ದರು.
- * ಕೊಡ್ಲಿಪೇಟೆ ಕಲ್ಲಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಅಭಿಮತ * ತಾಕೇರಿಯಲ್ಲಿ ಹಿಂದೂ ಸಂಗಮ
ಸೋಮವಾರಪೇಟೆ: ಧರ್ಮದ ಮಾರ್ಗದಲ್ಲಿ ಸಾಗಿದರೆ ಶಾಂತಿ ಪಾಲನೆ ಸಾಧ್ಯ ಎಂದು ಕೊಡ್ಲಿಪೇಟೆ ಕಲ್ಲಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಹೇಳಿದರು.
ಹಿಂದೂ ಸಂಗಮ ಸಮಿತಿಯಿಂದ ತಾಕೇರಿ ಸಮುದಾಯಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಕಿರಗಂದೂರು ಮಂಡಲ ಹಿಂದೂ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಸಂದೇಶ ನೀಡಿದರು.
ಹಿಂದೂ ಧರ್ಮವು ಕೇವಲ ಆಚರಣೆಗಳ ಸಮೂಹವಲ್ಲ, ಅದು ಮಾನವೀಯ ಮೌಲ್ಯಗಳ ಸಾಗರ ಎಂದರು. ಸತ್ಯ, ಅಹಿಂಸೆ, ದಯೆ, ಕ್ಷಮೆ, ಸೇವೆ ಇವುಗಳೇ ನಮ್ಮ ಧರ್ಮದ ಮೂಲ ಸ್ತಂಭಗಳು. ವಿದೇಶಿ ಪ್ರಭಾವಗಳ ನಡುವೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸುವ ಹೊಣೆ ಪ್ರತಿಯೊಬ್ಬರ ಮೇಲಿದೆ. ದೇವರು, ದೇವಸ್ಥಾನ, ಮಠಗಳ ಮೇಲಿನ ಭಕ್ತಿ ನಮ್ಮ ಒಳಗಿನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸ್ವಾಮೀಜಿ ಹೇಳಿದರು.
ತಂದೆ-ತಾಯಂದಿರು ಮಕ್ಕಳಿಗೆ ನೀತಿ ಕಥೆಗಳು, ಧಾರ್ಮಿಕ ಮೌಲ್ಯಗಳನ್ನು ತಿಳಿಸಬೇಕು. ಮೊಬೈಲ್ ಫೋನ್, ಜಾಲತಾಣ ಮತ್ತು ಭೌತಿಕ ಆಸೆಗಳಿಗೆ ಸಿಲುಕದೆ, ಭಾರತೀಯ ವಿದ್ಯೆಗಳ ಪವಿತ್ರತೆಯನ್ನು ಅರಿತು ಮಕ್ಕಳಲ್ಲಿ ರೂಢಿಸಬೇಕು. ಧರ್ಮವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂಬ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದರು.
ಜಗತ್ತನ್ನು ಒಂದು ಗೂಡಿಸುವ ಶಕ್ತಿ ಇದೆ:
ಕುಟುಂಬ ಪ್ರಬೋಧನ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಸುಬ್ರಾಯ ನಂದೋಡಿ ಮಾತನಾಡಿ, ಇಡೀ ಜಗತ್ತನ್ನು ಒಂದು ಗೂಡಿಸುವ ಶಕ್ತಿ ಭಾರತಕ್ಕಿದೆ. ಹಿಂದೂಗಳು ಒಗ್ಗಟ್ಟಾಗಿ, ಸಾಮರಸ್ಯದಿಂದ ಬದುಕಿದರೆ ಬಲಿಷ್ಠ ಭಾರತವನ್ನು ಕಟ್ಟಬಹುದು ಎಂದು ಅಭಿಪ್ರಾಯಿಸಿದರು. ಭಾರತದ ಒಂದು ತುದಿಯಲ್ಲಿ ಹಿಮಾಲಯ ಪರ್ವತವಿದೆ. ಮೂರು ಕಡೆ ಸಮುದ್ರವಿದೆ. ಪ್ರಾಕೃತಿಕವಾಗಿ ರಕ್ಷಣೆ ಹೊಂದಿರುವ ದೇಶ ನಮ್ಮದು ಎಂದರು. ಅತೀ ಹೆಚ್ಚು ನದಿಗಳು ನಮ್ಮ ದೇಶದೊಳಗೆ ಹರಿಯುತ್ತವೆ. ಸಮೃದ್ಧವಾದ ಜಲ ಸಂಪತ್ತು, ಖನಿಜ ಸಂಪತ್ತು ದೆ.
ಜ್ಞಾನ ವಿಕಾಸಕ್ಕೆ ವೇದ, ಉಪನಿಷತ್ತುಗಳಿವೆ. ಇವುಗಳ ಮೌಲ್ಯ ಅರಿತು ಪ್ರಪಂಚಕ್ಕೆ ಮಾದರಿ ರಾಷ್ಟ್ರವನ್ನಾಗಿ ಭಾರತವನ್ನು ರೂಪಿಸಬೇಕಿದೆ ಎಂದರು. ಸ್ವಾತಂತ್ರ್ಯ ದೊರೆತ ನಂತರ ದೇಶವನ್ನ ಆಳಬೇಕಾದ ಜವಾಬ್ದಾರಿಯುತ ನಾಯಕರನ್ನು ಪ್ರೇರೇಪಿಸುವ ಸೇವೆಯನ್ನು ಆರ್‌ಎಸ್‌ಎಸ್ ಮಾಡಿಕೊಂಡು ಬರುತ್ತಿದೆ. ಬಲಿಷ್ಠ ದೇಶವನ್ನು ಕಟ್ಟಲು ಈಗಾಗಲೇ ಇರುವ ಮಾನವ ಸಂಪನ್ಮೂಲವನ್ನು ಹುರಿದುಂಬಿಸುವುದೇ ಹಿಂದೂ ಸಂಗಮದ ಉದ್ದೇಶ ಎಂದರು. ಹಿಂದೂಗಳು ಒಗ್ಗಟ್ಟಾಗುವ ಮೂಲಕ ಆರ್‌ಎಸ್‌ಎಸ್ ಕನಸನ್ನು ಸಾಕಾರಗೊಳಿಸಬೇಕು ಎಂದು ಸುಬ್ರಾಯ ನಂದೋಡಿ ಹೇಳಿದರು.
ಕಿರಗಂದೂರು ಮಂಡಲ ಅಧ್ಯಕ್ಷ ಅಧ್ಯಕ್ಷ ಎಚ್.ಪಿ.ಶಿವಕುಮಾರ್, ಕಾಫಿ ಬೆಳೆಗಾರ ಎಂ.ಪಿ.ಮುತ್ತಣ್ಣ, ಗೃಹಿಣಿ ವಿಮಲಾ ಕೃಷ್ಣಕಾಂತ್, ಅಯೋಜಕರಾದ ಅಮೃತ್, ಸುಧೀರ, ಪ್ರವೀಣ್ ಇತರರು ಇದ್ದರು.
ಶಾಲಾ ಮಕ್ಕಳಿಂದ ಭರತನಾಟ್ಯ, ಯಕ್ಷಗಾನ ನೃತ್ಯ, ಜಾನಪದ ನೃತ್ಯ,ಭಗವದ್ಗೀತೆ ಪಠಣ ಗಮನಸೆಳೆಯಿತು. ಅಂಗನವಾಡಿಯಿಂದ ಮಹಿಳೆಯರು ಕಳಸ ಹೊತ್ತು ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದರು. ಕೇಸರಿ ಬಾವುಟಗಳನ್ನು ಹಿಡಿದ ಕಾರ್ಯಕರ್ತರು ಗಮನ ಸೆಳೆದರು.