ಸೋಮವಾರಪೇಟೆ: ಸಮೀಪದ ಶಾಂತಳ್ಳಿ-ಬೆಟ್ಟದಳ್ಳಿಯಲ್ಲಿರುವ ಶ್ರೀಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ಆಂಗ್ಲಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಶಾಲೆಯ 180ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ಅವರು ಉಚಿತವಾಗಿ ಪುಸ್ತಕ ವಿತರಿಸಿದರು. ಗಿರೀಶ್,ಪ್ರದೀಪ್,ಮಧು ಇದ್ದರು. 
ಕೊಡಗು

ಗ್ರಾಮೀಣ ಮಕ್ಕಳಿಗೂ ಉತ್ತಮ ಶಿಕ್ಷಣ ದೊರಕಲಿ

ಎ. ಆರ್. ರಘುರಾಮ
ಸೋಮವಾರಪೇಟೆ: ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉತ್ತಮ ಶಿಕ್ಷಣ ದೊರಕಬೇಕು ಎಂದು
ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ಆಶಿಸಿದರು.
ಸಮೀಪದ ಶಾಂತಳ್ಳಿ-ಬೆಟ್ಟದಳ್ಳಿಯಲ್ಲಿರುವ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಶಾಲೆಯ 180 ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಮಕ್ಕಳು ಪ್ರಾಥಮಿಕ ಹಂತದಿಂದಲೇ ಆಂಗ್ಲ ಮಾಧ್ಯಮದ ಶಿಕ್ಷಣದಿಂದ ಬಹುತೇಕ ವಂಚಿತರಾಗುತ್ತಾರೆ. ಮುಂದಿನ ಶೈಕ್ಷಣಿಕ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪಾಲಕರು ಕನ್ನಡ ಮತ್ತು ಆಂಗ್ಲ ಭಾಷಾ ಕಲಿಕೆಗೆ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.
ಇದು ಸ್ಪರ್ಧಾತ್ಮಕ ಯುಗ. ಆಂಗ್ಲ ಮಾಧ್ಯಮ ಶಿಕ್ಷಣ ಮಕ್ಕಳಿಗೆ ಇಂದು ಅನಿವಾರ್ಯವಾಗಿದೆ. ಬಡ ರೈತರ ಮಕ್ಕಳೂ ವಿದ್ಯಾವಂತರಾಗಬೇಕು. ದೇಶದ ಪ್ರಗತಿಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಪೂರಕವಾಗಿ
ನೋಟ್‌ಬುಕ್ ವಿತರಿಸಲಾಗುತ್ತಿದೆ. ಮಕ್ಕಳು ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದರು. ವಿದ್ಯಾಸಂಸ್ಥೆಯ ನಿರ್ದೇಶಕ ಕೆ.ಕೆ. ಗೋಪಾಲ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದರು. ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಬಗ್ಗೆ ಗಮನ ಹರಿಸಬೇಕು. ಮನೆಯಲ್ಲಿಯೂ ಪಾಠ ಪ್ರವಚನದ ಬಗ್ಗೆ ವಿಚಾರಿಸಬೇಕು. ಆಗಾಗ್ಗೆ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕಾ ಪ್ರಗತಿ ವಿವರ ತಿಳಿದುಕೊಳ್ಳಬೇಕು ಎಂದರು. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಹರಪಳ್ಳಿ ರವೀಂದ್ರ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ವ್ಯಯಿಸಿ ನೂರಾರು ಶಾಲೆಗಳ ಮಕ್ಕಳಿಗೆ ಲೇಖನ ಸಾಮಗ್ರಿ ನೀಡುತ್ತಿರುವುದು ಮಾದರಿಯಾಗಿದೆ ಎಂದರು.
ಸನ್ಮಾನ: ಗ್ರಾಮೀಣ ಭಾಗದ ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡಲು ಸಹಕಾರ ನೀಡಿದ ಮತ್ತು ಉಚಿತವಾಗಿ ನೋಟ್‌ಬುಕ್ ವಿತರಿಸಿದ ಹರಪಳ್ಳಿ ರವೀಂದ್ರ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗಿರೀಶ್ ಕಾರ್ಯಪ್ಪ, ನಿರ್ದೇಶಕರಾದ ಗುಡ್ಡಳ್ಳಿ ಮಧು, ರಾಜೇಶ್, ಕುಡಿಗಾಣ ಸುಧಿನ್, ತಲ್ತರೆಶೆಟ್ಟಳ್ಳಿ ಸುಖಾಂತ್ ಬಸವರಾಜು, ಕಾವೇರಮ್ಮ, ಗಂಧರ್ವ, ಬೆಟ್ಟದಳ್ಳಿ ಆದರ್ಶ, ಮುಖ್ಯಶಿಕ್ಷಕಿ ಲೀಲಾವತಿ, ಸಹ ಶಿಕ್ಷಕರಾದ ಭವ್ಯಾ, ಶ್ವೇತಾ, ಸುಜಾತಾ ಇದ್ದರು.