ಶ್ರೀ ಅಯ್ಯಪ್ಪ, ಭಗವತಿ, ಗಣಪತಿ ದೇವಾಲಯ.
ಸೋಮವಾರಪೇಟೆ: ತಾಲೂಕಿನ ಕಿಬ್ಬೆಟ್ಟ ಅಯ್ಯಪ್ಪ ಕಾಲನಿಯಲ್ಲಿ ನೆಲೆಸಿರುವ ಶ್ರೀ ಅಯ್ಯಪ್ಪ ದೇವಾಲಯ ಶ್ರದ್ಧೆ, ಭಕ್ತಿ, ನಂಬಿಕೆ ಹಾಗೂ ಭಾವೈಕ್ಯತೆಯ ಪ್ರತೀಕವಾಗಿ ಬೆಳೆಯುತ್ತಿದೆ. ಕಾರ್ಮಿಕ ವರ್ಗದ ಶ್ರಮ, ದಾನಿಗಳ ಸಹಕಾರ ಮತ್ತು ದೈವ ನಂಬಿಕೆಯ ಸಂಗಮದಿಂದ ನಿರ್ಮಾಣಗೊಂಡ ಈ ದೇಗುಲ, ನಂಬಿದ ಭಕ್ತನನ್ನು ಅಯ್ಯಪ್ಪ ಕಾಪಾಡುತ್ತಾನೆ ಎಂಬ ಭಾವನೆಗೆ ಜೀವಂತ ಸಾಕ್ಷಿಯಾಗಿದೆ.
ಈ ದೇವಾಲಯದ ಇತಿಹಾಸವೇ ಭಕ್ತಿಭಾವದಿಂದ ಆರಂಭವಾದ ಅನನ್ಯ ಕಥೆಯಾಗಿದೆ. 1982ರಲ್ಲಿ ಕೊರಗಪ್ಪ ಎಂಬ ಕಾರ್ಮಿಕರು ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ತೆರಳುವ ಭಕ್ತರಿಗಾಗಿ ಕಿಬ್ಬೆಟ್ಟ ಕಾಲನಿಯಲ್ಲಿರುವ ಒಂದು ಮರದ ಬುಡದಲ್ಲಿ ಸಣ್ಣ ಪೂಜೆ ಸಲ್ಲಿಸಿ ಭಕ್ತಿಭಾವದಿಂದ ಕಾರ್ಯನಿರ್ವಹಿಸುತ್ತಿದ್ದರು. ಯಾವುದೇ ಆಕರ್ಷಣೆ ಇಲ್ಲದೆ, ಕೇವಲ ನಂಬಿಕೆ ಮತ್ತು ಶ್ರದ್ಧೆಯೊಂದಿಗೆ ಆರಂಭವಾದ ಈ ಪೂಜಾ ಕ್ರಮ ಕ್ರಮೇಣ ಭಕ್ತರ ಗಮನ ಸೆಳೆಯಿತು. ನಂತರ ಮರದ ಬುಡದ ಪೂಜೆ ಹುಲ್ಲಿನ ಗುಡಿಸಲಿಗೆ ಸ್ಥಳಾಂತರಗೊಂಡಿತು. ಈ ಸಣ್ಣ ಗುಡಿಸಲೇ ಇಂದು 71 ಲಕ್ಷ ರೂ. ವೆಚ್ಚದ ದೇಗುಲವಾಗಿದೆ.
ಕಾಲಕ್ರಮೇಣ ಭಕ್ತರ ಸಂಖ್ಯೆ ಹೆಚ್ಚಾಗುತ್ತಾ ಬಂದಂತೆ, ದೇವಾಲಯ ನಿರ್ಮಾಣದ ಕನಸು ಮೂಡಿತು. 2011ರಲ್ಲಿ ಅಧಿಕೃತವಾಗಿ ದೇವಾಲಯ ನಿರ್ಮಾಣಕ್ಕೆ ಚಾಲನೆ ದೊರೆಯಿತು. ಆದರೆ ವಿವಿಧ ಕಾರಣಗಳಿಂದಾಗಿ ಸುಮಾರು 11 ವರ್ಷಗಳ ಕಾಲ ಕಾಮಗಾರಿ ಸ್ಥಗಿತಗೊಂಡೇ ಇತ್ತು. ಇದರಿಂದ ಭಕ್ತರಲ್ಲಿ ನಿರಾಸೆ ಮೂಡಿದರೂ ಅಯ್ಯಪ್ಪನ ಮೇಲಿನ ನಂಬಿಕೆ ಮಾತ್ರ ಕ್ಷೀಣವಾಗಲಿಲ್ಲ.
2022ರಲ್ಲಿ ಮಹತ್ವದ ತಿರುವು ಕಂಡಿತು. ಕೇರಳದ ತಂತ್ರಿಗಳಿಂದ ಅಷ್ಟಮಂಗಲ ಪ್ರಶ್ನೆ ನಡೆಸಿದ ಸಂದರ್ಭದಲ್ಲಿ ಇಲ್ಲಿ ಶ್ರೀ ಅಯ್ಯಪ್ಪ, ಶ್ರೀ ಭಗವತಿ ಹಾಗೂ ಶ್ರೀ ಗಣಪತಿ ದೇವಾಲಯಗಳನ್ನು ನಿರ್ಮಿಸಬೇಕೆಂಬ ದೈವಸಂಕೇತ ದೊರಕಿತು. ಇದನ್ನು ಭಕ್ತರು ದೈವಾಜ್ಞೆಯಾಗಿ ಸ್ವೀಕರಿಸಿದರು. ಅಲ್ಲಿಂದ ದೇವಾಲಯ ನಿರ್ಮಾಣಕ್ಕೆ ಹೊಸ ಉತ್ಸಾಹ ಸಿಕ್ಕಿತು. ಗ್ರಾಮಸ್ಥರು, ಕಾರ್ಮಿಕರು ಮತ್ತು ದಾನಿಗಳ ಸಹಕಾರದಿಂದ ಸುಮಾರು 71 ಲಕ್ಷ ರೂ. ಸಂಗ್ರಹಿಸಿ, ಇಂದು ಸುಂದರವಾದ ದೇವಾಲಯ ನಿರ್ಮಾಣಗೊಂಡಿದೆ. ಪ್ರಸಕ್ತ ವರ್ಷದಲ್ಲೇ 15 ಲಕ್ಷ ರೂ. ವೆಚ್ಚದ ಛಾವಣಿ ನಿರ್ಮಾಣಕ್ಕೆ ಸಿದ್ಧತೆ ಪ್ರಾರಂಭವಾಗಿದೆ.
ಈ ಅಯ್ಯಪ್ಪ ದೇವಾಲಯದ ಮತ್ತೊಂದು ವಿಶೇಷತೆ ಎಂದರೆ, ಇಲ್ಲಿ ವಾಸಿಸುವವರಲ್ಲಿ ಶೇ. 99ರಷ್ಟು ಮಂದಿ ಕಾರ್ಮಿಕರಾಗಿದ್ದಾರೆ. ದಿನನಿತ್ಯ ಕೂಲಿ ಕೆಲಸ ಮಾಡುವ ಕಾರ್ಮಿಕರ ಶ್ರಮದಿಂದಲೇ ಈ ದೇಗುಲ ನಿರ್ಮಾಣವಾಗಿದೆ. ಕಾರ್ಮಿಕರ ಕೈಗಳಿಂದ ಕಟ್ಟಿದ ದೇವಾಲಯ ಎಂಬ ಹೆಮ್ಮೆ ಇಲ್ಲಿನ ಜನರಲ್ಲಿದೆ. ಇದು ಕೇವಲ ಇಟ್ಟಿಗೆ, ಸಿಮೆಂಟ್ ಕಟ್ಟಡವಲ್ಲ, ಅವರ ನಂಬಿಕೆ, ಶ್ರಮ ಮತ್ತು ತ್ಯಾಗದ ಪ್ರತೀಕವಾಗಿದೆ.
ದೈವಶಕ್ತಿಯ ಪ್ರತೀಕ: ಶ್ರೀ ಅಯ್ಯಪ್ಪ ದೇವಾಲಯವನ್ನು ಭಕ್ತರು ದೈವಶಕ್ತಿ ಕೇಂದ್ರವೆಂದು ನಂಬುತ್ತಾರೆ. ಮದುವೆ ವಿಳಂಬ, ಮಕ್ಕಳ ಫಲ, ಆರೋಗ್ಯ ಸಮಸ್ಯೆಗಳು ಸೇರಿದಂತೆ ಜೀವನದ ಹಲವಾರು ಸಂಕಷ್ಟಗಳಿಗೆ ಪರಿಹಾರಕ್ಕಾಗಿ ಭಕ್ತರು ಇಲ್ಲಿ ಹರಕೆ ಹೊರುತ್ತಾರೆ. ಅಯ್ಯಪ್ಪ ಸನ್ನಿಧಿಯಲ್ಲಿ ನಂಬಿಕೆಯಿಂದ ಬೇಡಿಕೊಂಡರೆ, ಸಂಕಲ್ಪಗಳು ಈಡೇರುತ್ತವೆ ಎಂಬ ಗಾಢ ನಂಬಿಕೆ ಜನರಲ್ಲಿ ಇದೆ. ದೂರದೂರಿನಿಂದಲೂ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದಾರೆ.
ಇಲ್ಲಿನ ದೇವಾಲಯವನ್ನು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕೇಂದ್ರ ಎಂದು ಸಹ ಕರೆಯಲಾಗುತ್ತದೆ. ದೇವಾಲಯದ ಪೂಜೆ-ಪುನಸ್ಕಾರಗಳಿಗೆ ಮುಸ್ಲಿಂ ಸಮುದಾಯದವರು ಧನಸಹಾಯ ಮಾಡುವುದು ಇಲ್ಲಿನ ಸೌಹಾರ್ದತೆಯ ವಿಶಿಷ್ಟ ಉದಾಹರಣೆ.
ಪ್ರತಿ ವರ್ಷ ನಡೆಯುವ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜೆಗಳು, ಅನ್ನಸಂತರ್ಪಣೆ ಮತ್ತು ಭಕ್ತರ ಸಮಾಗಮ ಕಂಡುಬರುತ್ತದೆ. ಈ ಸಂದರ್ಭದಲ್ಲಿ ಕಾಲನಿಯ ವಾತಾವರಣವೇ ಭಕ್ತಿಮಯವಾಗುತ್ತದೆ. ಮಕ್ಕಳು, ಹಿರಿಯರು, ಮಹಿಳೆಯರು ಎಲ್ಲರೂ ಒಂದಾಗಿ ಸೇವೆಯಲ್ಲಿ ತೊಡಗುತ್ತಾರೆ.
ಕಿಬ್ಬೆಟ್ಟ ಅಯ್ಯಪ್ಪ ಕಾಲನಿಯ ಶ್ರೀ ಅಯ್ಯಪ್ಪ ದೇವಾಲಯವು ಕೇವಲ ಪೂಜಾ ಸ್ಥಳವಲ್ಲ ಅದು ಶ್ರಮಜೀವಿಗಳ ಶ್ರದ್ಧೆಯ ಪ್ರತಿಫಲ, ಭಾವೈಕ್ಯತೆಯ ಸಂಕೇತ ಮತ್ತು ನಂಬಿಕೆಯ ದೈವಶಕ್ತಿ ಕೇಂದ್ರವಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ವಾರ್ಷಿಕ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ. ವಿಷ್ಣುವಿನ ಅವತಾರವೇ ಶ್ರೀಅಯ್ಯಪ್ಪಸ್ವಾಮಿ ಆಗಿರುವುದರಿಂದ ವಾರ್ಷಿಕ ಪೂಜೆ ಅಭಿಷೇಕದ ಸಮಯದಲ್ಲಿ ಗರುಡ ಸಂಚಾರವಿರುತ್ತದೆ. ಅಭಿಷೇಕದ ಸಂದರ್ಭ ಗರುಡ ದೇವಾಲಯ ಮೇಲೆ ಸುತ್ತು ಹಾಕಿ ಹೋಗುತ್ತದೆ. ಈ ಒಂದು ವಿಸ್ಮಯವನ್ನು ಭಕ್ತಾದಿಗಳು ಕಣ್ತುಂಬಿಕೊಳ್ಳಲಿದ್ದಾರೆ.
ಅರ್ಚಕರು, ಶ್ರೀ ಅಯ್ಯಪ್ಪ ದೇವಾಲಯ
ಅಯ್ಯಪ್ಪ ಕಾಲನಿ ಕಾರ್ಮಿಕರು ವಾಸಿಸುವ ಸ್ಥಳವಾಗಿದೆ. ಎಲ್ಲ ಜಾತಿ ಜನಾಂಗದವರು ವಾಸ ಮಾಡುತ್ತಿದ್ದಾರೆ. ದೇವಾಲಯ ನಿರ್ಮಿಸಲು ಕಾರ್ಮಿಕರು ಧನಸಹಾಯ ಮಾಡಿದ್ದಾರೆ. ಸುತ್ತಮುತ್ತಲ ದಾನಿಗಳು ಹೆಚ್ಚಿನ ಹಣವನ್ನು ನೀಡಿದ್ದಾರೆ. ದೇವಾಲಯ ನಿರ್ಮಾಣವಾದ ಮೇಲೆ ಕಾರ್ಮಿಕರ ಬದುಕು ಒಂದಷ್ಟು ಉತ್ತಮವಾಗಿದೆ.
ಅಧ್ಯಕ್ಷ, ಶ್ರೀ ಅಯ್ಯಪ್ಪ ದೇವಾಲಯ ಆಡಳಿತ ಮಂಡಳಿ
ನಂಬಿದ ಭಕ್ತರನ್ನು ಅಯ್ಯಪ್ಪ ಸ್ವಾಮಿ ಕೈಬಿಡುವುದಿಲ್ಲ ಎಂಬುದು ನಂಬಿಕೆ ಇಲ್ಲಿನ ಜನರಲ್ಲಿದೆ. ಹೀಗಾಗಿ, ಭಕ್ತಾದಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪೂಜಾ ಉತ್ಸವಗಳಿಗೆ ದಾನಿಗಳು ಹೆಚ್ಚಿನ ಹಣವನ್ನು ನೀಡುತ್ತಾರೆ. ಕಾಲನಿಯಲ್ಲಿ ಮರದ ಬುಡದಲ್ಲಿ ಚೌಡಿಯನ್ನು ಪೂಜಿಸಲಾಗುತ್ತಿದೆ. ಶಕ್ತಿಯೂ ದೊಡ್ಡದಿದೆ. ವಾರ್ಷಿಕ ಪೂಜೆಯ ದಿನ ದೇವಾಲಯದಲ್ಲಿ ಚೌಡಿ ದೇವಿಯ ಸಂಚಾರವಿರುತ್ತದೆ. ಆ.8ರಂದು ಕೇರಳದ ತಂತ್ರಿ ಹರಿಕೃಷ್ಣ ನಂಬೂದರಿ ನೇತೃತ್ವದಲ್ಲಿ ವಾರ್ಷಿಕ ಪೂಜಾ ಉತ್ಸವ ನಡೆಯಲಿದೆ.
ಕಾರ್ಯದರ್ಶಿ, ಶ್ರೀ ಅಯ್ಯಪ್ಪ ದೇವಾಲಯ ಸಮಿತಿ