ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿದರು. ಮಹೇಶ್, ಸುನಿಲ್, ಕೃಷ್ಣಪ್ರಸಾದ್, ಲೋಹಿತ್ ಇದ್ದರು.
- ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಮಾಹಿತಿ
ಸೋಮವಾರಪೇಟೆ: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕಿನಲ್ಲಿ ಮನೆ ಮನೆ ಸಮೀಕ್ಷೆ ಹಾಗೂ ಗಣತಿ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ತಿಳಿಸಿದರು.
ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸೋಮವಾರ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಬಿಟ್ಟು ಹೋಗದಂತೆ ಮತ್ತು ಬೋಗಸ್ ಹೆಸರು ಸೇರ್ಪಡೆಯಾಗದಂತೆ ತಡೆಯಲು ರಾಜಕೀಯ ಪಕ್ಷಗಳ ಸಹಭಾಗಿತ್ವ ಮಹತ್ವವಾದದ್ದು. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಬೂತ್ ಮಟ್ಟದ ಏಜೆಂಟರು ಮತ್ತು ಸ್ಥಳೀಯ ಕಾರ್ಯಕರ್ತರನ್ನು ತಕ್ಷಣವೇ ಸಕ್ರಿಯಗೊಳಿಸಬೇಕು ಎಂದು ಹೇಳಿದರು.
ಕ್ಷೇತ್ರ ಮಟ್ಟದಲ್ಲಿ ಬಿಎಲ್‌ಒಗಳಿಗೆ ಪತ್ತೆ ಹಚ್ಚಲು ಸಾಧ್ಯವಾಗದ ಮತದಾರರನ್ನು ಪತ್ತೆಹಚ್ಚಲು ಜಂಟಿಯಾಗಿ ವಿಶೇಷ ಶ್ರಮ ವಹಿಸಬೇಕು. ಅಲ್ಲದೆ ಪತ್ತೆಹಚ್ಚಲಾದ ಮತದಾರರ ಕುರಿತು ಸಂಬಂಧಪಟ್ಟ ಬಿಎಲ್‌ಒಗಳಿಗೆ ಮಾಹಿತಿ ಕೊಡಬೇಕು ಎಂದು ಹೇಳಿದರು.
ಬಿಜೆಪಿ ಬಿಎಲ್‌ಎ ಮಹೇಶ್ ತಿಮ್ಮಯ್ಯ ಮಾತನಾಡಿ, ಶನಿವಾರಸಂತೆ, ದುಂಡಳ್ಳಿ ಭಾಗದಲ್ಲಿ ಸದನ ಫಲಿತಾಂಶ ತೃಪ್ತಿಕರವಾಗಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಬಿಎಲ್‌ಎ ಸುನಿಲ್ ಮಾತನಾಡಿ, ದುಂಡಳ್ಳಿ ಬಿಟ್ಟರೆ ಬಹುತೇಕ ಕಡೆ ಸರಿಯಾಗಿ ಪರಿಷ್ಕರಣೆಯಾಗುತ್ತಿದೆ. ನಾವು ಪ್ರತಿ ಬಿಎಲ್‌ಒಗಳಿಂದ ಪ್ರತಿದಿನ ಸಮೀಕ್ಷೆ ಮಾಹಿತಿ ಪಡೆಯುತ್ತಿದ್ದೇವೆ ಎಂದು ಹೇಳಿದರು.
ಸಭೆಯಲ್ಲಿ ಕಾಂಗ್ರೆಸ್ ಬಿಎಲ್‌ಎಗಳಾದ ಸಂದೀಪ್, ರುಬಿನಾ, ಬಿಜೆಪಿಯ ಎಸ್.ಆರ್.ಸೋಮೇಶ್. ದರ್ಶನ್ ಜೋಯಪ್ಪ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಚುನಾವಣಾ ಶಿರಸ್ತೇದಾರ್ ಲೋಹಿತ್ ಇದ್ದರು.