ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿ ಹಾಗೂ ವೈಜ್ಞಾನಿಕ ಪ್ರಯೋಗಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಲಕ್ಷ್ಮಣ, ಕಿ,ಕೆ.ಯು. ಸುಶ್ಮಿತಾ, ಯಜ್ಞ, ಕವಿತಾ,ರೂಪಾ ಇದ್ದರು. 
ಕೊಡಗು

ಸರ್. ಸಿ. ವಿ. ರಾಮನ್ ವೈಜ್ಞಾನಿಕ ಕ್ಷೇತ್ರಕ್ಕೆ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ಶಿಕ್ಷಕ ಸಿ. ಎಸ್. ಸುರೇಶ್ ಅಭಿಮತ
ನಾಪೋಕ್ಲು: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಇಲ್ಲಿನ ಡಾ ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿ ಹಾಗೂ ವೈಜ್ಞಾನಿಕ ಪ್ರಯೋಗಗಳ ಸ್ಪರ್ಧೆಯನ್ನು ಶನಿವಾರ ಆಯೋಜಿಸಲಾಗಿತ್ತು.
6, 7, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಯನ್ನು ಆಯೋಜಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು.
ನೇತಾಜಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ. ಎಸ್. ಸುರೇಶ್ ಮಾತನಾಡಿ, ವೈಜ್ಞಾನಿಕ ಸಂಶೋಧನೆಗಳು ಜಗತ್ತಿನ ಪಥವನ್ನು ಬದಲಿಸಿವೆ. ಸರ್ ಸಿ. ವಿ. ರಾಮನ್ ಸಂಶೋಧಿಸಿದ ರಾಮನ್ ಪರಿಣಾಮ ವೈಜ್ಞಾನಿಕ ಕ್ಷೇತ್ರಕ್ಕೆ ನೀಡಿದ ಬಹಳ ದೊಡ್ಡ ಕೊಡುಗೆಯಾಗಿದೆ. ರಾಂಟೆಜನ್ ಸಂಶೋಧಿಸಿದ ಕ್ಷ-ಕಿರಣ ಕೂಡ ವೈದ್ಯಕೀಯ ಕ್ಷೇತ್ರದ ಮಹತ್ವದ ಕೊಡುಗೆಯಾಗಿದೆ ಎಂದರು.
ವಸತಿ ಶಾಲೆಯ ಪ್ರಾಂಶುಪಾಲರಾದ ಕೆ.ಡಿ ನೀತಾ ಮಾತನಾಡಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬಳಸಿಕೊಳ್ಳಬೇಕು. ಕೇವಲ ಪರೀಕ್ಷೆಗಾಗಿ ಕಲಿಕೆ ಆಗಬಾರದು. ದೈನಂದಿನ ವ್ಯವಹಾರಗಳಲ್ಲಿ ವಿಜ್ಞಾನದ ವಿಷಯಗಳ ಬಗ್ಗೆ ಪ್ರಾಯೋಗಿಕ ಮಾಹಿತಿ ಹೊಂದಿರಬೇಕು ಎಂದರು.
ವಿಜ್ಞಾನದ ಶಿಕ್ಷಕಿ ರೇಷ್ಮಾ ಮಾತನಾಡಿ ಭಾರತೀಯ ಹೆಮ್ಮೆಯ ವಿಜ್ಞಾನಿ ಸರ್ ಸಿ. ವಿ. ರಾಮನ್ ಬೆಳಕಿನ ಚದುರುವಿಕೆಯನ್ನು ಒಳಗೊಂಡ ರಾಮನ್ ಪರಿಣಾಮವನ್ನು ಕಂಡುಹಿಡಿದ ಈ ದಿನವನ್ನು ರಾಷ್ಟ್ರೀಯ ವಿಜ್ಞಾನದ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ದಿನನಿತ್ಯದ ವಿಜ್ಞಾನ ಕುರಿತು ಕುತೂಹಲ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಕ ಲಕ್ಷ್ಮಣ, ಕಿ,ಕೆ.ಯು. ಸುಶ್ಮಿತಾ, ಯಜ್ಞ, ಕವಿತಾ,ರೂಪಾ,ಛಾಯ ,ಸುಧಾ ಇದ್ದರು.