ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಕೊಡಗಿನಲ್ಲಿ ಮಾನವ - ಆನೆ ಸಂಘರ್ಷ ನಿವಾರಣೆಗೆ ಸಂಬAಧಿಸಿದAತೆ ಕೇಂದ್ರ ಸರ್ಕಾರದಿಂದ ಮಹತ್ವದ ಭರವಸೆ ಸಿಕ್ಕಿರುವುದಾಗಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿನ ಮಾನವ-ಆನೆ ಸಂಘರ್ಷ ಸಮಸ್ಯೆ ಪರಿಹಾರದ ವಿಷಯದಲ್ಲಿ ಸಂಸದ ಯದುವೀರ್ ಒಡೆಯರ್ ಮಾಡಿಕೊಂಡಿದ್ದ ಮನವಿಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ.
2026ರ ಜೂನ್ 11ರಂದು ಸಂಸದ ಯದುವೀರ್ ಒಡೆಯರ್ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಯಾಗಿ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿರುವ ಸಚಿವರು ಕೊಡಗಿನ ಅರಣ್ಯ ಅಂಚಿನ ಪ್ರದೇಶಗಳಲ್ಲಿ ರೈತರು, ತೋಟಗಾರರು ಮತ್ತು ಸ್ಥಳೀಯ ನಿವಾಸಿಗಳನ್ನು ಕಾಡುತ್ತಿರುವ ಮಾನವ-ಆನೆ ಸಂಘರ್ಷ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಕೇಂದ್ರ ಸಚಿವಾಲಯವು ವನ್ಯಜೀವಿ ವಾಸಸ್ಥಳಗಳ ಅಭಿವೃದ್ಧಿ ಹಾಗೂ ಪ್ರಾಜೆಕ್ಟ್ ಟೈಗರ್ ಮತ್ತು ಎಲೆಫೆಂಟ್ ಸೇರಿದಂತೆ ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ರಾಜ್ಯ ಸರ್ಕಾರಗಳಿಗೆ ಆರ್ಥಿಕ ನೆರವು ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಇದಲ್ಲದೆ, ದಕ್ಷಿಣ ಭಾರತದ ಮಾನವ-ಆನೆ ಸಂಘರ್ಷವನ್ನು ಎದುರಿಸಲು ಪ್ರಾದೇಶಿಕ ಕಾರ್ಯಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಕೊಡಗು ಪ್ರಮುಖ ಸಂಘರ್ಷ ಪ್ರದೇಶಗಳಲ್ಲಿ ಒಂದಾಗಿ ಗುರುತಿಸಲಾಗಿದೆ. ಈ ಕಾರ್ಯಯೋಜನೆ ಆನೆಗಳ ವಾಸಸ್ಥಳ ಸುಧಾರಣೆ, ಆನೆ ಕಾರಿಡಾರ್‌ಗಳ ಸಂರಕ್ಷಣೆ ಮತ್ತು ನಿರ್ವಹಣೆ, ಮುನ್ನೆಚ್ಚರಿಕಾ ವ್ಯವಸ್ಥೆ, ತ್ವರಿತ ಪ್ರತಿಕ್ರಿಯೆ ವ್ಯವಸ್ಥೆ
ಹಾಗೂ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಒಳಗೊಂಡಿದೆ
ಕರ್ನಾಟಕ ರಾಜ್ಯಕ್ಕಾಗಿ ರೂಪಿಸಲಾದ ಈ ಐದು ವರ್ಷದ ಕಾರ್ಯಯೋಜನೆಗೆ ಸುಮಾರು 350 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದ್ದು, ಆನೆಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ, ಮಾನವ ವಾಸಸ್ಥಳ ಮತ್ತು ಕೃಷಿ ಪ್ರದೇಶಗಳಿಗೆ ಆನೆಗಳ ನುಗ್ಗುವಿಕೆ ಕಡಿಮೆ ಮಾಡುವಂತೆ ಹಾಗೂ ಜೀವಹಾನಿ ಮತ್ತು ಆಸ್ತಿ ನಷ್ಟ ತಡೆಯುವಂತೆ ಯೋಜಿಸಲಾಗಿದೆ.
ಇದಲ್ಲದೆ, ಭಾರತೀಯ ವನ್ಯಜೀವಿ ಸಂಸ್ಥೆ ದಕ್ಷಿಣ ಭಾರತದ ಮಾನವ-ಆನೆ ಸಹಬಾಳ್ವೆಗೆ ಸಂಬAಧಿಸಿದAತೆ ಉಪಗ್ರಹ ಟೆಲಿಮೆಟ್ರಿ ಮತ್ತು ಸಮೂಹ ಸಂವಹನ ಆಧಾರಿತ ಮುನ್ನೆಚ್ಚರಿಕಾ ವ್ಯವಸ್ಥೆ ಕುರಿತ ಅಧ್ಯಯನ ಕೈಗೊಳ್ಳಲು ಮುಂದಾಗಿದೆ. ಇದರ ಶಿಫಾರಸ್ಸುಗಳ ಆಧಾರದ ಮೇಲೆ ಕೊಡಗು ಪ್ರದೇಶದಲ್ಲಿ ವಿಶೇಷ ಮುನ್ನೆಚ್ಚರಿಕಾ ವ್ಯವಸ್ಥೆ ಜಾರಿಗೊಳ್ಳುವ ಸಾಧ್ಯತೆ ಇದೆ.
ಸಂಸದ ಯದುವೀರ್ ಒಡೆಯರ್ ಕೇಂದ್ರ ಸರ್ಕಾರದ ಸ್ಪಂದನೆಯನ್ನು ಸ್ವಾಗತಿಸಿದ್ದು, ಮಾನವ ಜೀವ ಮತ್ತು ವನ್ಯಜೀವಿಗಳ ರಕ್ಷಣೆ ಎರಡನ್ನೂ ಸಮತೋಲನದಲ್ಲಿ ಉಳಿಸುವ ದೀರ್ಘಕಾಲಿಕ ಪರಿಹಾರಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸಮುದಾಯಗಳ ಸಮನ್ವಯ ಅಗತ್ಯವೆಂದು ತಿಳಿಸಿದ್ದಾರೆ. ಕೊಡಗಿನ ರೈತರು ಮತ್ತು ನಿವಾಸಿಗಳ ಸಮಸ್ಯೆಗಳಿಗೆ ಆದ್ಯತೆ ನೀಡಿ ಪರಿಹಾರ ಕಲ್ಪಿಸಲು ತಾವು ನಿರಂತರವಾಗಿ ಶ್ರಮಿಸುತ್ತಿರುವುದಾಗಿ ಪುನರುಚ್ಚರಿಸಿದ್ದಾರೆ.