ಕೊಡಗು ಜಿಲ್ಲಾ ಸಿಐಟಿಯು ವತಿಯಿಂದ ನೆಲ್ಲಿಹುದಿಕೇರಿಯಲ್ಲಿ ಒಂದು ದಿನದ ಹಿರಿಯ ಮುಖಂಡರ ಹಾಗೂ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರ ನಡೆಯಿತು. ಧರ್ಮೇಶ್, ಪಿ.ಆರ್.ಭರತ್, ಶಾಜಿ ರಮೇಶ್, ಸಾಬು, ಸುಮಿತ್ರಾ ಇದ್ದರು. 
ಕೊಡಗು

30ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ

ಪ್ರಮುಖ ಮುಖ್ಯಾಂಶಗಳು

  • ಸಿಐಟಿಯು ಜಿಲ್ಲಾ ಕಾರ್ಯಾಗಾರದಲ್ಲಿ ತೀರ್ಮಾನ
  • 36,000 ಕನಿಷ್ಠ ವೇತನಕ್ಕೆ ಆಗ್ರಹ
ವಿರಾಜಪೇಟೆ: ಜಿಲ್ಲಾ ಕೇಂದ್ರಗಳಲ್ಲಿ ಸಿಐಟಿಯು ಸಂಘಟನೆಯನ್ನು ಬಲಪಡಿಸುವ ಹಾಗೂ ಕಾರ್ಮಿಕರ ವಿವಿಧ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಕೊಡಗು ಜಿಲ್ಲಾ ಸಿಐಟಿಯು ವತಿಯಿಂದ ನೆಲ್ಲಿಹುದಿಕೇರಿಯಲ್ಲಿ ಒಂದು ದಿನದ ಹಿರಿಯ ಮುಖಂಡರ ಹಾಗೂ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ರಾಜ್ಯ ಉಪಾಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಧರ್ಮೇಶ್, ಕಾರ್ಮಿಕರ ಕನಿಷ್ಠ ವೇತನವನ್ನು 36,000 ರೂ.ಗೆ ಹೆಚ್ಚಿಸಬೇಕು ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಮೇ 30ರಂದು ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.
ಪ್ರಸ್ತುತ ದೇಶವು ತೀವ್ರ ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದಾಗಿ ದೇಶದಲ್ಲಿ ಉತ್ಪಾದನಾ ವಲಯ ಸಂಪೂರ್ಣವಾಗಿ ಕುಸಿದಿದ್ದು, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ದೇಶದ ಆರ್ಥಿಕತೆ ಮುನ್ನಡೆಯುತ್ತಿದೆ ಎಂಬ ಸರ್ಕಾರದ ವಾದ ಸುಳ್ಳಾಗಿದ್ದು, ಅಂತಾರಾಷ್ಟ್ರೀಯ ಸಂಸ್ಥೆಗಳೇ ಭಾರತದ ಜಿಡಿಪಿ ಲೆಕ್ಕಾಚಾರ ತಪ್ಪಾಗಿದೆ ಎಂದು ಬಹಿರಂಗಪಡಿಸುತ್ತಿವೆ ಎಂದು ಹೇಳಿದರು.
ಸರ್ಕಾರ ತಂದಿರುವ 4 ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ಮುಷ್ಕರ ಮಾಡುವ ಹಕ್ಕಿನಿಂದ ವಂಚಿತಗೊಳಿಸಿ, ಅವರನ್ನು ಮಾಲೀಕರ ಗುಲಾಮರನ್ನಾಗಿ ಮಾಡಲು ಹೊರಟಿವೆ. ಜನರ ಗಮನವನ್ನು ಈ ನೈಜ ಆರ್ಥಿಕ ಸಮಸ್ಯೆಗಳಿಂದ ಬೇರೆಡೆ ಸೆಳೆಯಲು ಸರ್ಕಾರ ಧರ್ಮ, ಜಾತಿ ಹಾಗೂ ಕೋಮು ರಾಜಕಾರಣವನ್ನು ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 2025ರ ಜನವರಿಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ಲ್ಲಿ ನಡೆಸಿದ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಿತ್ತಾದರೂ, ಮಾಲೀಕರ ಒತ್ತಡಕ್ಕೆ ಮಣಿದು ಅದನ್ನು ಇನ್ನೂ ಜಾರಿಗೊಳಿಸುತ್ತಿಲ್ಲ. ಕನಿಷ್ಠ ವೇತನಕ್ಕೆ ಆಗ್ರಹಿಸಿ ಕೊಡಗು ಜಿಲ್ಲಾದ್ಯಂತ ಸಿಐಟಿಯು ಸದಸ್ಯರು ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ಬೃಹತ್ ಜನಾಂದೋಲನ ರೂಪಿಸಬೇಕು. ಮೇ 30 ರಂದು ಕೊಡಗು ಡಿಸಿ ಕಚೇರಿ ಮುತ್ತಿಗೆ ಹಾಕಲು ಅಂದು ಕೊಡಗು ಜಿಲ್ಲೆಯ ಸಹಸ್ರಾರು ಕಾರ್ಮಿಕರನ್ನು ಒಂದುಗೂಡಿಸಿ ಅವರ ಮುಖಾಂತರ ಸರ್ಕಾರದ ಮೇಲೆ ತೀವ್ರ ಒತ್ತಡ ತರಬೇಕು ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಎ.ಸಿ. ಸಾಬು, ಪ್ರಧಾನ ಕಾರ್ಯದರ್ಶಿ ಪಿ.ಆರ್. ಭರತ್, ಅಂಗನವಾಡಿ ನೌಕರರ ಸಂಘದ ನಾಯಕಿ ಸುಮಿತ್ರಾ, ಹಮಾಲಿ ಕಾರ್ಮಿಕರ ಮುಖಂಡ ಶಾಜಿ ರಮೇಶ್ ಮತ್ತು ಕೊಡಗು ಜಿಲ್ಲೆಯ ಹಿರಿಯ ಮುಖಂಡರು ಹಾಗೂ ಪ್ಲಾಂಟೇಷನ್ ಕಾರ್ಮಿಕರ ಮುಖಂಡ ಎನ್.ಡಿ. ಕುಟ್ಟಪ್ಪ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ಅಂಗನವಾಡಿ, ಆಶಾ, ತೋಟದ ಕಾರ್ಮಿಕರು, ಹಮಾಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಕಾಫಿ ಕ್ಯೂರಿಂಗ್ ವರ್ಕ್ಸ್ ಕಾರ್ಮಿಕರು, ಸರ್ಕಾರಿ ಆಸ್ಪತ್ರೆ ನೌಕರರು, ಗ್ರಾಮಾಂತರ ಪಂಚಾಯತ್ ನೌಕರರು ಹಾಗೂ ವಾಹನ ಚಾಲಕರ ಸಂಘಟನೆಯ ಪದಾಧಿಕಾರಿಗಳು ಮತ್ತು ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.