ಗಾಯಗೊಂಡ ಬೆಳೆಗಾರ ಅಂಚೆಮನೆ ಸುದಕುಮಾರ್.
ಸಿದ್ದಾಪುರ: ವಾಲ್ನೂರ್ ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್‌ಮಂಗಲ ಒಂಟಿಯಂಗಡಿಯಲ್ಲಿ ಮಂಗಳವಾರ ರಾತ್ರಿ ಕಾಡಾನೆ ದಾಳಿಗೆ ಬೆಳೆಗಾರರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಭ್ಯತ್‌ಮಂಗಲ ಒಂಟಿಯಂಗಡಿ ನಿವಾಸಿ ಅಂಚೆಮನೆ ಸುದಕುಮಾರ್ (56) ಗಾಯಗೊಂಡವರು. ಮಂಗಳವಾರ ರಾತ್ರಿ ತಮ್ಮ ಮನೆಯ ಸಮೀಪ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ಕಾಡಾನೆಯೊಂದು ದಾಳಿ ನಡೆಸಿದೆ. ಕಾಡಾನೆ ದಾಳಿಯ ವೇಳೆ ಸುದಕುಮಾರ್ ಅವರ ಕಿರುಚಾಟದ ಶಬ್ದ ಕೇಳಿದ ಸ್ಥಳೀಯರು ಹೊರಬಂದು ಶಬ್ದ ಮಾಡಿ ಕಾಡಾನೆಯನ್ನು ಓಡಿಸಿದ್ದಾರೆ. ದಾಳಿಯಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಅಮ್ಮತ್ತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.