ಮಾಲ್ದಾರೆಯಲ್ಲಿ ರೈತ ಉತ್ಪಾದಕ ಸಂಘಟನೆ (ಎಫ್‌ಪಿಒ) ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕೊಡಗು ನಬಾರ್ಡ್ ಸಂಸ್ಥೆಯ ಡಿಡಿಎಂ ವಿ.ರಮೇಶ್ ಬಾಬು, ಒಡಿಪಿ ಸಂಸ್ಥೆಯ ನಿರ್ದೇಶಕ ಟೆನ್ನಿ ಕುರಿಯನ್ ಮತ್ತಿತರರಿದ್ದರು. 
ಕೊಡಗು

ರೈತರು ಸ್ವಾವಲಂಬಿಗಳಾಗಿ ಬೆಳೆಯಲಿ

ಸಿದ್ದಾಪುರ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಅನುದಾನದ ಸಹಯೋಗದಲ್ಲಿ ಒಡಿಪಿ ವತಿಯಿಂದ ಮಾಲ್ದಾರೆಯಲ್ಲಿ ರೈತ ಉತ್ಪಾದಕ ಸಂಘಟನೆ (ಎಫ್‌ಪಿಒ) ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮಂಗಳವಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ನಬಾರ್ಡ್ ಸಂಸ್ಥೆಯ ಡಿಡಿಎಂ ವಿ.ರಮೇಶ್‌ಬಾಬು, ಕೃಷಿ ಕ್ಷೇತ್ರದಲ್ಲಿ ರೈತ ಉತ್ಪಾದಕ ಸಂಸ್ಥೆಗಳು ಮಾದರಿಯಾಗಿ ಬೆಳೆಯಬೇಕಿದ್ದು, ಬಾಳೆಗುಂಡಿ ಹಾಡಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ರೈತರು ಸ್ವಾವಲಂಬಿಗಳಾಗಿ ಬೆಳೆಯಬೇಕು ಹಾಗೂ ತಾವು ಬೆಳೆದ ಕಾಫಿಯನ್ನು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಮಾರಾಟ ಮಾಡುವಂತಾಗಬೇಕು ಎಂದು ಆಶಿಸಿದರು.
ನಬಾರ್ಡ್ ಹಾಗೂ ಒಡಿಪಿ ಸಂಸ್ಥೆ 3 ವರ್ಷಗಳ ಕಾಲ ರೈತರಿಗೆ ಅಗತ್ಯ ಸಹಕಾರ ಮತ್ತು ಮಾರ್ಗದರ್ಶನ ನೀಡಲಿದ್ದು, ಬಳಿಕ ರೈತರು ಸ್ವತಂತ್ರವಾಗಿ ಸಂಸ್ಥೆಯನ್ನು ಮುನ್ನಡೆಸುವಂತೆ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಒಡಿಪಿ ಸಂಸ್ಥೆಯ ನಿರ್ದೇಶಕ ಟೆನ್ನಿ ಕುರಿಯನ್ ಮಾತನಾಡಿ, ಒಡಿಪಿ ಸಂಸ್ಥೆ ಕಳೆದ 42 ವರ್ಷಗಳಿಂದ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳಾ ಸಬಲೀಕರಣ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಹಾಗೂ ಸಾಮರ್ಥ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.
ಸಂಸ್ಥೆಯು ಜಲಾನಯನ ಅಭಿವೃದ್ಧಿ, ಸುಸ್ಥಿರ ಕೃಷಿ, ಅರಣ್ಯೀಕರಣ, ತೋಟಗಾರಿಕೆ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು.
2026ನೇ ಸಾಲಿನಲ್ಲಿ ಮಾಲ್ದಾರೆ ಎಫ್‌ಪಿಒ ಕ್ಲಸ್ಟರ್‌ಗೆ ನಬಾರ್ಡ್ ಯೋಜನೆ ಮಂಜೂರಾಗಿದ್ದು, ಟಿಡಿಎಫ್ ಯೋಜನೆಯಡಿ ಬಾಳೆಗುಂಡಿ ಹಾಗೂ ವಾಲ್ಲೂರು ಗ್ರಾಮಗಳನ್ನು ಕ್ಲಸ್ಟರ್ ವ್ಯಾಪ್ತಿಗೆ ಸೇರಿಸಿಕೊಂಡು ಎಫ್‌ಪಿಒ ಚಟುವಟಿಕೆಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹಾಗೂ ತೋಟಗಾರಿಕಾ ತಜ್ಞ ಡಾ.ಪ್ರಭಾಕರ್, ಮಣ್ಣು ವಿಜ್ಞಾನಿ ಡಾ.ಮೋಹನ್, ದಕ್ಷಿಣ ಕೊಡಗು ಕಾಫಿ ಮಂಡಳಿಯ ಉಪನಿರ್ದೇಶಕಿ ಡಾ.ಶ್ರೀದೇವಿ ಹಾಗೂ ಯೋಜನಾ ಅಧಿಕಾರಿ ಅನ್ನಮ್ಮ ರೈತರಿಗೆ ವಿವಿಧ ಕೃಷಿ ವಿಷಯಗಳ ಕುರಿತು ಮಾಹಿತಿ ನೀಡಿದರು.
ಎಫ್‌ಪಿಒ ಪ್ರೋಗ್ರಾಂ ಕೋಆರ್ಡಿನೇಟರ್ ಜಯರಾಮು, ಡಾಕ್ಯುಮೆಂಟೇಷನ್ ಮತ್ತು ಫಂಡ್ ರೈಸಿಂಗ್ ಅಧಿಕಾರಿ ಲೀಮಾ ಜೋಸೆಫ್, ಪ್ರಾಜೆಕ್ಟ್ ಫೀಲ್ಡ್ ಅಸೋಸಿಯೇಟ್ ಸಿದ್ದರಾಜು, ಜೋನಲ್ ಕೋಆರ್ಡಿನೇಟರ್ ಜಾಯ್ಸ, ಯತೀಶ್, ಕೊಡಗು ವಲಯದ ಕಮ್ಯುನಿಟಿ ಎಜುಕೇಟರ್ ಧನುಕುಮಾರ್, ಸ್ಥಳೀಯ ರೈತರು ಹಾಗೂ ಒಡಿಪಿ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.