ಕೊಡಗು ಜಿಲ್ಲಾ ಪಂಚಾಯಿತಿ ಕಚೇರಿ 
ಕೊಡಗು

ಜಿಲ್ಲೆಯ ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ

ಮಡಿಕೇರಿ:
ಕೊಡಗಿನಲ್ಲಿ ಬಹುತೇಕ ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಇಲ್ಲದೆ ಬಣಗುಡುತ್ತಿವೆ. ವಿವಿಧ 58 ಇಲಾಖೆಗಳಲ್ಲಿ ಒಟ್ಟು 9044 ಮಂಜೂರಾದ ಹುದ್ದೆಗಳ ಪೈಕಿ 5079 ಹುದ್ದೆಗಳಷ್ಟೇ ಭರ್ತಿ ಆಗಿದ್ದು, 3965 ಹುದ್ದೆಗಳು ಖಾಲಿ ಉಳಿದಿವೆ. ಸರ್ಕಾರಿ ಕಚೇರಿಗಳಲ್ಲಿ ಶೇ. 45ಕ್ಕೂ ಅಧಿಕ ಪ್ರಮಾಣದಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಆಡಳಿತ ಯಂತ್ರ ಚುರುಕಾಗಿ ನಡೆಯದೆ ಇದರ ನೇರ ಪರಿಣಾಮ ಸಾರ್ವಜನಿಕರ ಮೇಲೆ ಆಗುತ್ತಿದೆ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳನ್ನು ಪ್ರಮುಖ ಸ್ತಂಭಗಳೆAದು ಗುರುತಿಸಲಾಗಿದೆ. ಸಂವಿಧಾನದ ಅಡಿಯಲ್ಲಿ ಪ್ರತ್ಯೇಕ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಇವು ಹೊಂದಿವೆ. ಶಾಸಕಾಂಗ ಕಾನೂನುಗಳನ್ನು ರೂಪಿಸಿದರೆ ಕಾರ್ಯಾಂಗ ಇವುಗಳನ್ನು ಜಾರಿಗೊಳಿಸುವ ಮಹತ್ವದ ಹೊಣೆಗಾರಿಕೆ ಹೊಂದಿವೆ. ಕಾರ್ಯಾಂಗ ಸುಲಲಿತವಾಗಿ ಕಾರ್ಯನಿರ್ವಹಿಸಬೇಕಾದರೆ ಅದಕ್ಕಾಗಿ ನಿಗದಿಪಡಿಸಿರುವಂತೆ ಅಧಿಕಾರಿ, ಸಿಬ್ಬಂದಿ ವರ್ಗ ಇರಬೇಕಾಗುತ್ತದೆ. ಸಿಬ್ಬಂದಿ ಸಂಖ್ಯೆ ಕಡಿಮೆ ಆದರೆ ಕಾರ್ಯಭಾರದ ಒತ್ತಡ ಹೆಚ್ಚಾಗಿ ಆಗವು ಕೆಲಸಗಳು ಆಗುವುದೇ ಇಲ್ಲ. ಸದ್ಯಕ್ಕೆ ಕೊಡಗಿನಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ.
ಇರುವುದರಲ್ಲಿ ಪೊಲೀಸ್ ಇಲಾಖೆ ಪರಿಸ್ಥಿತಿ ಉತ್ತಮವಾಗಿದ್ದು, ಇಲ್ಲಿ ಶೇ.7ರಷ್ಟು ಮಾತ್ರ ಹುದ್ದೆಗಳು ಖಾಲಿ ಇವೆ. ಉಳಿದಂತೆ ಹೆಚ್ಚಿನ ಇಲಾಖೆಗಳು ಶೇ. 40-50ರಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಕಂದಾಯ ಇಲಾಖೆಯಲ್ಲಿ 365 ಮುಂಜೂರಾದ ಹುದ್ದೆಗಳಿದ್ದು ಶೇ. 30ರಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿದೆ. 146 ಮಂಜೂರಾದ ಹುದ್ದೆಗಳು ಇರುವ ಕೃಷಿ ಇಲಾಖೆಯಲ್ಲಿ ಶೇ. 80ರಷ್ಟು ಹುದ್ದೆಗಳು ಖಾಲಿ ಇವೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಶೆ. 60, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಶೇ. 85, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಶೇ. 67, ತೋಟಗಾರಿಕೆ ಇಲಾಖೆಯಲ್ಲಿ ಶೇ. 75, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಶೇ.52, ಸಾರಿಗೆ ಇಲಾಖೆಯಲ್ಲಿ ಶೇ. 60, ಸೆಸ್ಕ್ನಲ್ಲಿ ಶೇ. 55, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಶೇ. 90, ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಶೇ. 90, ಅಬಕಾರಿ ಇಲಾಖೆಯಲ್ಲಿ ಶೇ. ಶೇ. 55 ಹೀಗೆ ಪ್ರಮುಖ ಇಲಾಖೆಗಳಲ್ಲಿ ಶೇ. 50ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ.
ಹೆಚ್ಚಿನ ಇಲಾಖೆಗಳಲ್ಲಿ ಒಬ್ಬನೇ ಸಿಬ್ಬಂದಿಗೆ ಬೇರೆ ಬೇರೆ ಜವಾಬ್ದಾರಿಗಳನ್ನು ಕೊಡಲಾಗಿದೆ. ಕಾರ್ಯಭಾರದ ಒತ್ತಡ ಹೆಚ್ಚಾಗಿ ಯಾವ ಕೆಲಸವೂ ಸರಿಯಾಗಿ ಆಗುತ್ತಿಲ್ಲ. ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳ ಕೊರತೆ ಇದ್ದು ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಎಫ್‌ಡಿಸಿ, ಎಸ್‌ಡಿಸಿ ನೌಕರರಿಗೆ ಒಬ್ಬೊಬ್ಬರಿಗೆ 4-5 ಹಾಸ್ಟೆಲ್‌ಗಳ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಇವರು ಹಗಲು ಕಚೇರಿಯಲ್ಲಿ ಸಂಜೆ ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇದೆ. ವಿವಿಧ ಇಲಾಖೆಗಳಲ್ಲೂ ಈ ರೀತಿ ಜವಾಬ್ದಾರಿ ಕೊಟ್ಟಿರುವುದರಿಂದ ಮನೆ ಮತ್ತು ಸಂಸಾರಕ್ಕೆ ಸಮಯ ಕೊಡಲು ಸಾಧ್ಯವಾಗದೆ ನೌಕರರು ಮಾನಸಿಕ ಒತ್ತಡಕ್ಕೆ ಒಳಗಾಗಿರುವುದೂ ಕಂಡು ಬರುತ್ತಿದೆ.
ಮಡಿಕೇರಿ ನಗರಸಭೆಯಲ್ಲೂ ಇದೇ ಕತೆ. ಮಂಜೂರಾದ 184 ಹುದ್ದೆಗಳ ಪೈಕಿ ಶೇ. 67ರಷ್ಟು ಪ್ರಮಾಣದಲ್ಲಿ ನೌಕರರ ಕೊರತೆ ಇದೆ. ಹಾಗಾಗಿ ಇಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾರ್ವಜನಿಕರ ಕೆಲಸ ಆಗುತ್ತಿಲ್ಲ. ಇದರ ಸಿಟ್ಟು ಕೌನ್ಸಿಲರ್‌ಗಳ ಮೇಲೆ ನಾಗರಿಕರು ತೋರಿಸುತ್ತಿದ್ದು, ಕೌನ್ಸಿಲರ್‌ಗಳು ಅಸಹಾಯಕರಾಗಿ ಸರ್ಕಾರದ ಕಡೆಗೆ ಕೈ ತೋರಿಸುವಂತಾಗಿದೆ. ಜಿಲ್ಲಾ ಪಂಚಾಯತ್, ಜಿಲ್ಲಾಧಿಕಾರಿ ಕಚೇರಿ, ಕಂದಾಯ ಇಲಾಖೆಗಳಲ್ಲೂ ಹುದ್ದೆಗಳು ಭರ್ತಿಯಾಗದ ಪರಿಣಾಮ ಜಿಲ್ಲೆಯ ಹೆಚ್ಚಿನ ಇಲಾಖೆಗಳಲ್ಲಿ ಯಾವುದೇ ಕೆಲಸ ಕಾರ್ಯಗಳಾಗುತ್ತಿಲ್ಲ. ಖಾಲಿ ಇರುವ ಜವಾಬ್ದಾರಿಯುತ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಇಲ್ಲ. ಹಾಗಾಗಿ ಸರ್ಕಾರಿ ನೌಕರರ ಕೊರತೆ ಗಂಭಿರ ಸಮಸ್ಯೆಯಾಗಿ ಪರಿಣಮಿಸಿದೆ.
ಆಡಳಿತದಲ್ಲಿ ದಕ್ಷತೆ ಕಾಪಾಡಿಕೊಳ್ಳಲು ಖಾಲಿ ಇರುವ ಹುದ್ದೆಗಳ ಭರ್ತಿ ಅತ್ಯಗತ್ಯ. ಇದು ಪಾರದರ್ಶಕ ಆಡಳಿತಕ್ಕೆ ಕಾರಣವಾಗುವುದಲ್ಲದೆ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ನಿಗದಿತ ಸಮಯದಲ್ಲಿ ತಲುಪುವಂತೆ ಮಾಡುವಲ್ಲಿ ಸಹಕಾರಿ ಆಗಿದೆ. ಆದರೆ ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಈಗ ಆಡಳಿತಾತ್ಮಕ ಸಮಸ್ಯೆ ಮಾತ್ರವಲ್ಲ. ಇದು ಸಾರ್ವಜನಿಕರ ದೈನಂದಿನ ಬದುಕಿನ ಮೇಲೂ ನೇರ ಪರಿಣಾಮ ಉಂಟು ಮಾಡುತ್ತದೆ.
ಪ್ರಮುಖ ಇಲಾಖೆಗಳಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆಯಿದ್ದಾಗ ಅರ್ಜಿಗಳ ವಿಲೇವಾರಿ ನಿಧಾನವಾಗುತ್ತದೆ. ಪ್ರಮಾಣಪತ್ರಗಳ ವಿತರಣೆ, ಪರವಾನಗಿ ಪಡೆಯುವುದು ಅಥವಾ ಸರ್ಕಾರದ ಸೌಲಭ್ಯಗಳು ಜನರಿಗೆ ತಲುಪಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಕಚೇರಿಗಳಲ್ಲಿ ಇರುವ ಕೆಲವೇ ಸಿಬ್ಬಂದಿ ಮೇಲೆ ಕೆಲಸದ ಅತಿಯಾದ ಒತ್ತಡವಿರುತ್ತದೆ. ಇದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಗಮನಹರಿಸಲು ಅಥವಾ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗುವುದಿಲ್ಲ. ಇದರಿಂದ ಕಡತಗಳ ವಿಲೇವಾರಿಯಲ್ಲೂ ತಪ್ಪುಗಳು ಕಾಣಿಸಿಕೊಳ್ಳಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
ಇಬ್ಬರು ಅಥವಾ ಮೂವರು ಸಿಬ್ಬಂದಿ ಮಾಡಬೇಕಾದ ಕೆಲಸ ಒಬ್ಬ ಸಿಬ್ಬಂದಿ ಮಾಡಬೇಕಾಗಿ ಬಂದಾಗ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಇದು ಸಿಬ್ಬಂದಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕ್ರಮೇಣ ಕೆಲಸದ ಕಡೆಗೆ ಆಸಕ್ತಿ ಕಡಿಮೆಯಾಗುವಂತೆ ಮಾಡುತ್ತದೆ. ಕೆಲಸಗಳು ವಿಳಂಬವಾದಾಗ, ಜನರು ತಮ್ಮ ಕೆಲಸಗಳನ್ನು ಬೇಗ ಮುಗಿಸಿಕೊಳ್ಳಲು ಮಧ್ಯವರ್ತಿಗಳನ್ನು ಆಶ್ರಯಿಸುತ್ತಾರೆ. ಇದು ಪರೋಕ್ಷವಾಗಿ ಭ್ರಷ್ಟಾಚಾರ ಹೆಚ್ಚಾಗಲು ದಾರಿ ಮಾಡಿಕೊಡುತ್ತದೆ. ಇಂಥ ಸನ್ನಿವೇಶ ಬಹುತೇಕ ಇಲಾಖೆಗಳಲ್ಲಿ ನಿರ್ಮಾಣ ಆಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸರ್ಕಾರ ಹೊಸ ಯೋಜನೆಗಳನ್ನು ಘೋಷಿಸಿದರೂ, ಅವುಗಳನ್ನು ಕಾರ್ಯಗತಗೊಳಿಸಲು ತಳಮಟ್ಟದಲ್ಲಿ ಸಿಬ್ಬಂದಿ ಇಲ್ಲದಿದ್ದರೆ ಯೋಜನೆಗಳು ಕೇವಲ ಕಾಗದದ ಮೇಲೆ ಉಳಿಯುತ್ತವೆ. ಹೆಚ್ಚಿನ ಇಲಾಖೆಗಳಲ್ಲಿ ಈ ಸ್ಥಿತಿ ಕಂಡುಬರುತ್ತಿದೆ. ಸಕಾಲಕ್ಕೆ ಸೇವೆ ಸಿಗದಿದ್ದಾಗ ಜನರು ಇಲಾಖೆಗಳ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ. ಕಚೇರಿಗಳಿಗೆ ಪದೇ ಪದೇ ಅಲೆಯುವುದು ಸಾರ್ವಜನಿಕರಲ್ಲಿ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗುತ್ತದೆ. ಈ ಕೋಪ ಕೊನೆಗೆ ಜನಪ್ರತಿನಿಧಿಗಳ ಮೇಲೂ ತಿರುಗುವಂತಾಗುತ್ತದೆ ಎನ್ನುವುದು ಮಡಿಕೇರಿ ನಗರಸಭೆ ಸದಸ್ಯರೊಬ್ಬರ ಅಭಿಪ್ರಾಯ.
"

ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲೂ ಸಿಬ್ಬಂದಿ ಕೊರತೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಇದರಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಅರಿವಿದೆ. ಮುಂದೆ ನೇಮಕಾತಿ ನಡೆಯುವ ಸಂದರ್ಭ ಜಿಲ್ಲೆಗೆ ಆದ್ಯತೆ ನೀಡುವಂತೆ ಮತ್ತು ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು. ಜನಸಾಮಾನ್ಯರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು.

"

ನಮ್ಮ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಮೂವರ ಕೆಲಸ ನಾನೊಬ್ಬನೇ ಮಾಡಬೇಕಿದೆ. ಬೇರೊಂದು ಇಲಾಖೆಯ ಹೊಣೆಗಾರಿಯನ್ನೂ ಕೊಟ್ಟಿದ್ದಾರೆ. ಕಚೇರಿ ಅವಧಿಯಲ್ಲಿ ಕೆಲಸಗಳನ್ನು ಮುಗಿಸಲು ಸಾಧ್ಯವಾಗುತ್ತಿಲ್ಲ. ಕೆಡಿಪಿ ಸಭೆ, ಪ್ರಗತಿ ಪರಿಶೀಲನಾ ಸಭೆಗಳಿದ್ದ ಸಂದರ್ಭಗಳಲ್ಲಿ ಸಿದ್ಧತೆಗಳನ್ನು ನಡೆಸಬೇಕಾದ ಮನೆಗೆ ಕೂಡ ಹೋಗದೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಇದು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದ್ದು, ಸಂಸಾರದ ಕಡೆಗೂ ಗಮನಹರಿಸಲು ಸಾಧ್ಯವಾಗುತ್ತಿಲ್ಲ.