ಕೋವಿ ಮತ್ತು ಕೊಳಲು ಹೆಸರಿನ ನೂತನ ಚಲನಚಿತ್ರಕ್ಕೆ ಮಡಿಕೇರಿ ರಾಜಾಸೀಟ್‌ನಲ್ಲಿ ಜೋತಿಷಿ ಆರ್ಯವರ್ಧನ್ ಗುರೂಜಿ ಮುಹೂರ್ತ ಪೂಜೆ ನೆರವೇರಿಸಿ ಮಾತನಾಡಿದರು. ಹೇಮಂತ್ ಕುಲಾಲ್, ಹೆಚ್.ಟಿ. ಅನಿಲ್, ಚಿನ್ನಸ್ವಾಮಿ, ಅಕ್ಷತಾ ಪಾಂಡವಪುರ ಮತ್ತಿತರರು ಇದ್ದರು.
ನಗರದ ರಾಜಾಸೀಟ್‌ನಲ್ಲಿ ಕೋವಿ ಮತ್ತು ಕೊಳಲು ಹೆಸರಿನ ನೂತನ ಚಲನಚಿತ್ರಕ್ಕೆ ಶುಕ್ರವಾರ ಮುಹೂರ್ತ ನೆರವೇರಿಸಲಾಯಿತು. ಹಿರಿಯ ಕಲಾವಿದ ಕಾಂತಾರ ಖ್ಯಾತಿಯ ಬಾಸುಮ ಕೊಡಗು ನಿರ್ದೇಶನದಲ್ಲಿ ಮಂಗಳೂರಿನ ಇಂಪೀರಿಯಲ್ ಪ್ರೊಡಕ್ಷನ್ಸ್ ಸಂಸ್ಥೆಯ ನಿರ್ಮಾಣದಲ್ಲಿ ತಯಾರಾಗುವ ಕೋವಿ ಮತ್ತು ಕೊಳಲು ಚಿತ್ರಕ್ಕೆ ಜೋತಿಷಿ ಆರ್ಯವರ್ಧನ್ ಗುರೂಜಿ ಮುಹೂರ್ತ ಪೂಜೆ ನೆರವೇರಿಸಿ ಕ್ಲಾಪ್ ಮಾಡಿದರು. ಉತ್ತಮ ಕನ್ನಡ ಚಿತ್ರಗಳು ತೆರೆಗೆ ಬರಬೇಕಾಗಿರುವುದು ಇಂದಿನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಬಾಸುಮ ಅವರ ಕೋವಿ ಮತ್ತು ಕೊಳಲು ಭರವಸೆ ಮೂಡಿಸಿದೆ ಎಂದು ಅವರು ಈ ಸಂದರ್ಭ ಹೇಳಿದರು.
ಇಂಪೀರಿಯಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಕುಲಾಲ್ ಮಾತನಾಡಿ ಕೋವಿ ಮತ್ತು ಕೊಳಲು ಉತ್ತಮ ಕಥೆ ಹೊಂದಿರುವ ಹಿನ್ನೆಲೆಯಲ್ಲಿ ನಿರ್ಮಾಣಕ್ಕೆ ಮುಂದಾಗಿರುವುದಾಗಿ ಹೇಳಿದರು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಹೆಚ್.ಟಿ. ಅನಿಲ್ ಮಾತನಾಡಿ, ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಹೆಸರಾಗಿರುವ ಹಿರಿಯ ರಂಗಕರ್ಮಿ ಬಾಸುಮ ಅವರು ಕನ್ನಡದ ಗಟ್ಟಿ ಕಥೆಯನ್ನು ಆಧರಿಸಿ ಕೋವಿ ಮತ್ತು ಕೊಳಲು ಚಿತ್ರವನ್ನು ತೆರೆಗೆ ತೆರುತ್ತಿರುವುದು ಶ್ಲಾಘನೀಯ ಪ್ರಯತ್ನ. ಅನೇಕ ರಂಗಕರ್ಮಿಗಳಿಗೆ ಈ ಚಿತ್ರ ಅವಕಾಶ ಕಲ್ಪಿಸಿರುವುದು ಮೆಚ್ಚತಕ್ಕದ್ದು ಎಂದರು.
ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ಮಾತನಾಡಿ, ಡಾ. ರಾಜ್ ಕುಮಾರ್, ವಿಷ್ಣುವರ್ಧನ್ ಮತ್ತಿತರ ನಟರು ಕನ್ನಡ ಪರವಾದ ಸಂಸ್ಕೃತಿಯನ್ನು ದೇಶವ್ಯಾಪಿ ಬಿಂಬಿಸಿದ್ದರು. ಕುಟುಂಬ ಸಹಿತ ವೀಕ್ಷಿಸುವಂಥ ಕನ್ನಡ ಚಿತ್ರಗಳು ಹೆಚ್ಚಾಗಿ ನಿರ್ಮಾಣವಾಗಬೇಕಾಗಿದೆ ಎಂದು ಹೇಳಿದರು.
ಕೋವಿ ಮತ್ತು ಕೊಳಲು ಸಿನಿಮಾ ನಿರ್ದೇಶಕ ಬಾಸುಮ ಕೊಡಗು ಮಾತನಾಡಿ, ಗುರುರಾಜ ಮಾರ್ಪಳ್ಳಿಯವರ "ಗರ್ಭ" ಕಾದಂಬರಿ ಆಧಾರಿತ ಕೋವಿ ಮತ್ತು ಕೊಳಲು ಸಿನೆಮಾ ಕಲಾತ್ಮಕ ಹಾಗೂ ವಾಣಿಜ್ಯಿಕ ಚಲನಚಿತ್ರವಾಗಿದೆ. ಮಡಿಕೇರಿ, ಸಂಪಾಜೆ ಮತ್ತು ಸುಳ್ಯ ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ. ಕಲೆ ಮತ್ತು ಹಣದ ನಡುವಿನ ಸಂಘರ್ಷಗಳ ಕುರಿತ ಕಥೆಯನ್ನು ಇಲ್ಲಿ ಚಲನಚಿತ್ರವಾಗಿ ನಿರ್ಮಿಸಲಾಗುತ್ತಿದೆ. ಈ ವರ್ಷಧ ಸೆಪ್ಪಂಬರ್‌ನಲ್ಲಿ ಚಿತ್ರ ತೆರೆಕಾಣಲಿದೆ ಎಂದರು.
ಚಿತ್ರದ ನಾಯಕಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದೆ ಅಕ್ಷತಾ ಪಾಂಡವಪುರ ಮಾತನಾಡಿ, ಇದೊಂದು ಉತ್ತಮ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ರಂಗಭೂಮಿಯಲ್ಲಿ ಹೆಸರು ಮಾಡಿರುವ ಅನೇಕರು ನಟಿಸುತ್ತಿದ್ದಾರೆ. ತಾನು ರಾಜ್ಯವ್ಯಾಪಿ ರಂಗಪ್ರದರ್ಶನ ನೀಡಿದ್ದರೂ ಕೊಡಗು ಜಿಲ್ಲೆಯಲ್ಲಿ ಅವಕಾಶ ದೊರಕಿರಲಿಲ್ಲ. ಈ ಚಿತ್ರದ ಮೂಲಕ ಮಡಿಕೇರಿಗೆ ಬರುವ ಅವಕಾಶ ಲಭಿಸಿತು ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ. ಸಂದೀಪ್ ಮಾತನಾಡಿದರು.
ಪಿಎಸ್ ಫಿಲಂಸ್ ನಿರ್ದೇಶಕ ಬಿ.ಟಿ. ಕುಮಾರ್, ಪ್ರೊಡಕ್ಷನ್ ಮ್ಯಾನೇಜರ್ ಜಯ ಕುಮಾರ್, ತೋಟಗಾರಿಕಾ ಇಲಾಖಾ ಹಿರಿಯ ನಿರ್ದೇಶಕ ಫಣೀಂದ್ರ, ಪುರಾತತ್ವ ಇಲಾಖೆಯ ಅಧಿಕಾರಿ ರೇಖಾ ಈ ಸಂದರ್ಭ ಇದ್ದರು.
ಶೌರ್ಯತೇಜ ಚಿತ್ರಕಥೆ, ಸಂಭಾಷಣೆ ಬರೆದಿರುವ ಚಿತ್ರಕ್ಕೆ ಛಾಯಾಗ್ರಾಹಕರಾಗಿ ದೃಶಾ ಕೊಡಗು, ಕಲಾ ನಿರ್ದೇಶಕರಾಗಿ ಲೋಕೇಶ್ ಊರುಬೈಲು ಕಾರ್ಯನಿರ್ವಹಿಸುತ್ತಿದ್ದಾರೆ. ತಾರಾಗಣದಲ್ಲಿ ಅಕ್ಷತಾ ಪಾಂಡವಪುರ, ನವೀನ್ ಡಿ.ಪಡೀಲ್, ಮೋಹನ್ ಶೇಣಿ, ಮುರಳಿ ಶೃಂಗೇರಿ, ಆನಂದ ತುಮಕೂರು, ಶೈಲಶ್ರೀ, ಡಿಂಗ್ರಿ ನರೇಶ್, ಪಲ್ಲವಿ , ಕುಶಾಲನಗರದ ಮಾನ್ಯ ಕುಮಾರ್ ಅಭಿನಯಿಸುತ್ತಿದ್ದಾರೆ.
ರಾಜಾಸೀಟ್ ಬಳಿ ನೂತನ ಕಾಮಗಾರಿ ಶಂಕುಸ್ಥಾಪನೆಗೆ ಬಂದಿದ್ದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕೋವಿ ಮತ್ತು ಕೊಳಲ ಚಿತ್ರತಂಡವನ್ನು ಭೇಟಿಯಾಗಿ ಶುಭಹಾರೈಸಿದರು. ಕೊಡಗಿನ ಸಂಪಾಜೆ ವ್ಯಾಪ್ತಿಯಲ್ಲಿ ಚಿತ್ರೀಕರಣ ನಡೆಸುವ ಮೂಲಕ ಜಿಲ್ಲೆಯ ಸುಂದರ ದೃಶ್ಯಗಳನ್ನು ಪ್ರೇಕ್ಷಕರಿಗೆ ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದರು.