ಕುಶಾಲನಗರದಲ್ಲಿ ಜೂ. 23 ರಂದು ನಡೆಯಲಿರುವ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪ್ರಥಮ ಸಮ್ಮೇಳನದ ಕಚೇರಿಯನ್ನು ಬುಧವಾರ ಆರಂಭಿಸಲಾಯಿತು. ಹೆಚ್.ವಿ. ಶಿವಪ್ಪ, ಎಚ್.ಬಿ. ಚಂದ್ರಪ್ಪ, ಶಾಂಭಶಿವಮೂರ್ತಿ, ಉದಯಕುಮಾರ್, ಕೆ. ಎಸ್. ಮೂರ್ತಿ, ಬಿ. ನಟರಾಜು, ಉಷಾ ಗುರುಪ್ರಸಾದ್, ವಿಜಯಾ ಫಾಲಾಕ್ಷ ಮತ್ತಿತರರು ಇದ್ದರು. 
ಕೊಡಗು

ಶರಣ ಸಾಹಿತ್ಯ ಸಮ್ಮೇಳನ ಕಚೇರಿ ಆರಂಭ

ಕುಶಾಲನಗರ:
ಕುಶಾಲನಗರದಲ್ಲಿ ಜೂ. 23 ರಂದು ನಡೆಯಲಿರುವ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪ್ರಥಮ ಸಮ್ಮೇಳನದ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಕಚೇರಿಯನ್ನು ಬುಧವಾರ ಆರಂಭಿಸಲಾಯಿತು. ನಗರದ ಸೋಮೇಶ್ವರ ದೇವಾಲಯ ರಸ್ತೆಯ ಮೂರನೇ ತಿರುವಿನ ಬಿ. ನಟರಾಜು ನಿವಾಸದಲ್ಲಿ ತೆರೆಯಲಾಗಿರುವ ಕಚೇರಿಯನ್ನು ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ. ಶಿವಪ್ಪ ಮತ್ತು ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷ ಎಚ್.ಬಿ. ಚಂದ್ರಪ್ಪ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಹೆಚ್.ವಿ. ಶಿವಪ್ಪ ಕೊಡಗು ಜಿಲ್ಲೆಯ ವಾಣಿಜ್ಯ ಕೇಂದ್ರ ಕುಶಾಲನಗರದಲ್ಲಿ ನಡೆಯುತ್ತಿರುವ ಮೊದಲನೇ ಶರಣ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಆಚರಿಸುವ ಸಂಬAಧ ಸಮ್ಮೇಳನ ಸಮಿತಿಯ ಪದಾಧಿಕಾರಿಗಳು ಕಾರ್ಯನಿರತರಾಗಿ ಅಚ್ಚುಕಟ್ಟಾಗಿ ಹಾಗೂ ಶಿಸ್ತು ಬದ್ಧವಾಗಿ ಕಾರ್ಯಯೋಜನೆ ರೂಪಿಸಬೇಕು. ಸುತ್ತೂರು ಜಗದ್ಗುರುಗಳು ಇದೇ ಮೊದಲ ಬಾರಿಗೆ ಕುಶಾಲನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರ್ಪಡೆಯಾಗುವ ಮೂಲಕ ಅವರನ್ನು ಜಾತ್ಯತೀತವಾಗಿ ಹಾಗೂ ಧರ್ಮಾತೀತವಾಗಿ ಸ್ವಾಗತಿಸಿ ಕಾರ್ಯಕ್ರಮಕ್ಕೆ ಮೆರುಗು ತರಬೇಕು ಎಂದರು.
ಎಪಿಸಿಎಂಎಸ್ ಅಧ್ಯಕ್ಷ ಎಚ್.ಬಿ. ಚಂದ್ರಪ್ಪ ಮಾತನಾಡಿ ಶರಣ ಸಾಹಿತ್ಯ ಸಮ್ಮೇಳನ ಇತರೆ ಸಮ್ಮೇಳನಗಳಿಗಿಂತ ಹೊರತಾದ ಸಮ್ಮೇಳನವಾಗಿ ರೂಪುಗೊಳ್ಳಬೇಕಿದೆ. ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಅತ್ಯಂತ ಶಿಸ್ತುಬದ್ಧವಾಗಿ ನಡೆಯಬೇಕಿದೆ. ಸಮ್ಮೇಳನ ಸಮಿತಿಯ ಪದಾಧಿಕಾರಿಗಳು ಸರ್ವ ಜನರನ್ನು ಸಮ್ಮೇಳನಕ್ಕೆ ಆಹ್ವಾನಿಸುವ ಮೂಲಕ ಸಮ್ಮೇಳನವನ್ನು ಊರಿನ ಹಬ್ಬವಾಗಿ ಆಚರಿಸಬೇಕೆಂದು ಹೇಳಿದರು.
ಮಹಾಸಭಾ ಪ್ರಧಾನ ಕಾರ್ಯದರ್ಶಿ ಶಾಂಭಶಿವಮೂರ್ತಿ, ಉಪಾಧ್ಯಕ್ಷ ಉದಯಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ. ಎಸ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ. ನಟರಾಜು, ಕದಳಿ ವೇದಿಕೆ ಜಿಲ್ಲಾ ಅಧ್ಯಕ್ಷೆ ಸರೋಜಾ ಆರಾಧ್ಯ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೋಹನ್ ಹಕ್ಕೆ, ಅಕ್ಕನ ಬಳಗದ ಅಧ್ಯಕ್ಷೆ ಕಮಲ ಉದಯಕುಮಾರ್, ಕದಳಿ ವೇದಿಕೆ ಕುಶಾಲನಗರ ತಾಲೂಕು ಅಧ್ಯಕ್ಷೆ ಹೇಮಲತಾ, ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಉಷಾ ಗುರುಪ್ರಸಾದ್, ಅಕ್ಕನ ಬಳಗದ ಗೌರವಾಧ್ಯಕ್ಷೆ ವಿಜಯಾ ಫಾಲಾಕ್ಷ, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಟಿ.ಬಿ. ಜಗದೀಶ್, ಕುಶಾಲನಗರ ಸಹಕಾರ ಸಂಘದ ಉಪಾಧ್ಯಕ್ಷೆ ನೇತ್ರಾವತಿ, ಸಮ್ಮೇಳನದ ವಿವಿಧ ಸಮಿತಿಗಳ ಅಧ್ಯಕ್ಷರಾದ ಎಸ್. ನಂದೀಶ್, ಪರಮೇಶ್, ಡಾ.ಹೇಮಲತಾ, ಶಿವಲಿಂಗು, ಮೋಹಿನಿ ನಟರಾಜು, ಮನುದೇವಿ ಇತರು ಇದ್ದರು.