ಶನಿವಾರಸಂತೆ: ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮುಗಿಸಿ ಯಾವುದೇ ಖಾಸಗಿ ಕಂಪನಿಗೂ ಕೆಲಸಕ್ಕೆ ಸೇರದೆ ತಂದೆ ನೀಡಿದ 8 ಎಕರೆ ಭೂಮಿಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿ ಯಶಸ್ಸು ಕಂಡಿದ್ದಾರೆ ಕೊಡ್ಲಿಪೇಟೆ ಗ್ರಾಮದ ಯತೀಶ್.
ಇವರು ತಮ್ಮ ಭೂಮಿಯಲ್ಲಿ ಕಾಫಿ, ಅಡಿಕೆ, ಕಾಳುಮೆಣಸು, ತೆಂಗು ಇನ್ನಿತರ ಬೆಳೆಯನ್ನು ಬೆಳೆಯುತ್ತಿದ್ದಾರೆ. ಕಾಫಿ ತಳಿಗಳಾದ ಅರೇಬಿಕಾ, ರೋಬಸ್ಟಾ ಕಾಫಿ ಬೆಳೆದಿದ್ದಾರೆ. ರೋಬಸ್ಟಾ ಎಕರೆಗೆ 40ರಿಂದ 50 ಚೀಲ ಹಾಗೂ ಅರೇಬಿಕಾ ಕಾಫಿ ಪಾರ್ಚಮೆಂಟ್ ಎಕರೆಗೆ ಸುಮಾರು 12ರಿಂದ 15 ಚೀಲ ಕುಯ್ಯುತ್ತಾರೆ.
ಕಾಫಿ ತೋಟದ ಕಾಡುಜಾತಿಯ ಮರ ಹಾಗೂ ಸಿಲ್ವರ್ ಮರಗಳಿಗೆ ಕಾಳು ಮೆಣಸು ಬಳ್ಳಿಗಳನ್ನು ಹಬ್ಬಿಸಿದ್ದಾರೆ. ಕಾಳುಮೆಣಸು ತಳಿಗಳಾದ ಪಣಿಯೂರು-1, ಪಣಿಯೂರು -2, ಕರಿಮುಂಡ, ಐಐಎಸ್‌ಆರ್ ಹಾಗೂ ತೇಮಮ್ಮ ಎಂಬ ತಳಿಯನ್ನು ಬೆಳೆದಿದ್ದಾರೆ. ಕಾಲಕ್ಕೆ ಸರಿಯಾಗಿ ಸ್ಪ್ರೇ, ಪೋಷಕಾಂಶ ಮಿಶ್ರಣ, ಸಿಂಪಡಣೆ, ಸುಣ್ಣ, ಬೇವಿನ ಹಿಂಡಿ, ಮರಗಸಿ, ನೀರಿನ ವ್ಯವಸ್ಥೆ ಮಾಡುತ್ತಾರೆ. ಕಾಳುಮೆಣಸು ಕೊಯ್ಲಿಗೆ ಮೊದಲು ಅಕ್ಟೋಬರ್, ನವೆಂಬರ್‌ನಲ್ಲಿ ಬಳ್ಳಿಗಳ ಬುಡಕ್ಕೆ ನೀರು ಹಾಯಿಸುವುದರಿಂದ ಮಾರ್ಚ್‌ನಲ್ಲಿ ಮಳೆ ಬಂದರೆ ಇದರಿಂದ ಕಾಳಿನ ಗಾತ್ರ ಹೆಚ್ಚಾಗಿ ಅಧಿಕ ಇಳುವರಿ ಪಡೆಯಬಹುದು ಎಂದು ಯತೀಶ್ ಹೇಳುತ್ತಾರೆ.
35ರಿಂದ 40 ಅಡಿ ಎತ್ತರದ ಸಿಲ್ವರ್ ಹಾಗೂ ಅಡಿಕೆ ಹಾಗೂ ಬೇರೆ ಬೇರೆ ಕಾಡು ಜಾತಿ ಮರಗಳಿಗೆ ಕಾಳುಮೆಣಸು ಬಳ್ಳಿ ಹಬ್ಬಿಸಿದ್ದಾರೆ. ಒಂದು ಎಕರೆಗೆ 330ರಿಂದ 460 ಕೆಜಿ ಇಳುವರಿ ಪಡೆಯುತ್ತಿದ್ದಾರೆ. ಕಾಫಿ ಹಾಗೂ ಇತರ ಬೆಳೆಗಳಿಗೆ ಹೋಲಿಕೆ ಮಾಡಿದರೆ ಕಾಳುಮೆಣಸು ಉತ್ತಮ ಆದಾಯ ಗಳಿಸುವ ಬೆಳೆ ಎನ್ನುತ್ತಾರೆ ಯತೀಶ್.
ಅಡಿಕೆ ಮರಗಳಿಂದ ಉತ್ತಮ ಆದಾಯ ಗಳಿಸಬಹುದೆಂದು ಅಡಿಕೆ ಗಿಡಗಳನ್ನು ಪ್ರತ್ಯೇಕವಾಗಿ ನೆಡಲಾಗಿದೆ. ಇದು ಇದೀಗ ಫಸಲು ನೀಡುವ ಹಂತಕ್ಕೆ ತಲುಪುತ್ತಿವೆ. ಕಾಫಿ ತೋಟಗಳಿಗೆ ಪ್ರತ್ಯೇಕ ಕೊಳವೆಬಾವಿ ಮಾಡಿಕೊಂಡಿದ್ದಾರೆ ಹಾಗೂ ಹೇಮಾವತಿ ಹಿನ್ನೀರಿನ ಹೊಳೆ ನೀರು ಲಭ್ಯವಿದ್ದು, ಕಾಫಿ ಹಾಗೂ ಕಾಳುಮೆಣಸು, ಅಡಿಕೆಗೆ ಸ್ಪ್ರಿಂಕ್ಲರ್ ಮಾದರಿಯಲ್ಲಿ ನೀರು ಹಾಯಿಸುತ್ತಿದ್ದಾರೆ.
ಪ್ರತಿ ವರ್ಷ ಕಾಳುಮೆಣಸು ಹಾಗೂ ಕಾಫಿ ಗಿಡಗಳನ್ನು ಪರಿಚಯಸ್ಥರು ನರ್ಸರಿ ಮಾಡಿರುವವರ ಮನೆಯಿಂದ ತಂದು ಹಾಗೂ ಒಂದಷ್ಟು ಗಿಡಗಳನ್ನು ಮನೆಯಲ್ಲಿ ನರ್ಸರಿ ಮಾಡಿ ನೆಡುತ್ತಾರೆ. ಇತ್ತೀಚೆಗೆ ತಮ್ಮ ತೋಟದಲ್ಲಿ ನೆಲದಲ್ಲಿ ಹರಡಿರುವ ಆರೋಗ್ಯವಾಗಿರುವ ಬಳ್ಳಿಗಳನ್ನು ಮೂರು ಅಡಿ ಕತ್ತರಿಸಿ ನೆಡುತ್ತಿದ್ದಾರೆ. ಇದು ಚೆನ್ನಾಗಿ ಬರುತ್ತಿದೆ, ಈ ರೀತಿ ಮಾಡುವುದರಿಂದ ನಮಗೆ ಖರ್ಚು ಕಡಿಮೆ ಎನ್ನುತ್ತಾರೆ ಯತೀಶ್.
ಉದ್ಯೋಗ ಹುಡುಕದೆ, ತೋಟದ ಕೆಲಸ ಮಾಡಿ: ಕೃಷಿ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ನಷ್ಟವಾಗುವುದಿಲ್ಲ, ಕಾಫಿ ತೋಟಗಳಿದ್ದರೂ ಡಿಗ್ರಿ, ಪಿಯುಸಿ ಓದಿದ ತಕ್ಷಣ ಬೆಂಗಳೂರು, ಮೈಸೂರು, ಮುಂತಾದ ಕಡೆಗೆ ಉದ್ಯೋಗ ಹುಡುಕಾಟ ನಡೆಸಲು ತೆರಳುತ್ತಾರೆ. ಈ ಪ್ರವೃತ್ತಿಯನ್ನು ಬಿಡಬೇಕು. ಹೊಲ, ಗದ್ದೆ, ತೋಟಗಳಿದ್ದರೆ ಅದನ್ನೇ ಅಭಿವೃದ್ಧಿಪಡಿಸಲು ಮುಂದಾಗಬೇಕು. ಕೃಷಿಯನ್ನು ಶ್ರದ್ಧೆಯಿಂದ ಸರಿಯಾದ ರೀತಿ ಸಮಯಕ್ಕೆ ಸರಿಯಾಗಿ ಎಲ್ಲ ಕೆಲಸ ಮಾಡಬೇಕು, ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು, ಯಾವುದೇ ಕೆಲಸವನ್ನು ಯಾವುದೋ ಸಮಯಕ್ಕೆ ಮಾಡದೆ ಸಮಯಕ್ಕೆ ಸರಿಯಾಗಿ ಮಾಡಬೇಕು, ನೀರಾವರಿ ಗದ್ದೆಯಲ್ಲಿ ಒಂದೇ ಬೆಳೆ ಬೆಳೆಯದೆ ಬೇರೆ ಬೇರೆ ಬೆಳೆಗಳನ್ನು ಬೆಳೆಯಬೇಕು, ಆಗಿದ್ದಾಗ ಕೃಷಿಯಲ್ಲಿ ನಷ್ಟವಾಗುವುದಿಲ್ಲ ಎನ್ನುತ್ತಾರೆ ಯತೀಶ್.
ಸೊಪ್ಪಿನಿಂದ ಮಣ್ಣಿನ ಫಲವತ್ತತೆ: ಮಣ್ಣಿನ ಆರೋಗ್ಯ, ಕಾರ್ಮಿಕರ ಆರೋಗ್ಯ ಹಾಗೂ ನಾವು ಬೆಳೆದ ಬೆಳೆಯನ್ನು ಸೇವಿಸುವ ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಕಳೆನಾಶಕ ಹಾಗೂ ಕೀಟನಾಶಕಗಳನ್ನು ಬಳಸಬಾರದು ಎನ್ನುತ್ತಾರೆ ಇವರು. ಇವನ್ನು ಬಳಸುವಂತಹ ಸಂದರ್ಭದಲ್ಲಿ ಮಾಸ್ಕ್ ಧರಿಸಿ ಸಿಂಪಡಣೆ ಮಾಡುತ್ತಿದ್ದಾರೆ.
ತೋಟದಲ್ಲಿ ಹೆಚ್ಚು ಸೊಪ್ಪನ್ನು ಉತ್ಪತ್ತಿ ಮಾಡುವಂತಹ ಕಾಡುಜಾತಿ ಮರ, ಗಿಡಗಳನ್ನು ಬೆಳೆದು ಸೊಪ್ಪನ್ನು ಮಣ್ಣಿಗೆ ಹಾಕುವುದರಿಂದ ಮಣ್ಣು ಫಲವತ್ತಾಗುತ್ತದೆ ಎಂದು ಹೆಚ್ಚಾಗಿ ಇಂತಹ ಮರಗಳನ್ನು ನೆಡಲಾಗಿದೆ.
ಇವರಿಗೆ ಬೇರೆ ಬೇರೆ ಬೆಳೆಗಳನ್ನು ಬೆಳೆಯಲು ಆಸಕ್ತಿ ಇದೆ. ಆದರೆ ಕಾಡುಪ್ರಾಣಿ, ಕಾಡಾನೆಗಳ ಹಾವಳಿಯಿಂದಾಗಿ ಕೆಲವೊಂದು ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕೊಡ್ಲಿಪೇಟೆ ಬಿ.ಕೆ.ಯತೀಶ್.
ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿ: ಇತ್ತೀಚಿನ ದಿನಗಳಲ್ಲಿ ನುರಿತ ಕೃಷಿ ಕಾರ್ಮಿಕರ ಸಮಸ್ಯೆ ಎದುರಾಗುತ್ತಿದೆ. ಜತೆಗೆ ತಾನು ಬೆಳೆದಂತಹ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಇದ್ದರೂ ರೈತರಿಗೆ ಬೆಲೆ ಸಿಗದಂತಾಗಿದೆ. ರೈತರು ಬೆಳೆದ ಬೆಳೆಯ ಬಹುತೇಕ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ. ಇದನ್ನು ತಪ್ಪಿಸಲು ಸರ್ಕಾರ ಸೂಕ್ತ ವ್ಯವಸ್ಥೆಯನ್ನು ಒದಗಿಸಿದರೆ ಬಹಳ ಅನುಕೂಲವಾಗುತ್ತದೆ.
ಮಣ್ಣಿನ ಫಲವತ್ತತೆ, ರಾಸಾಯನಿಕ ಬಳಕೆ, ಕೀಟನಾಶಕಗಳ ಬಳಕೆ, ಸಾವಯವ ಗೊಬ್ಬರದ ಬಳಕೆ, ಮಾರುಕಟ್ಟೆಯ ಕುರಿತು ತರಬೇತಿಯನ್ನು ಹಮ್ಮಿಕೊಂಡು ರೈತರಿಗೆ ನೆರವಾಗುವಂತಹ ಕಾರ್ಯಗಳನ್ನು ರೈತರ ಬಳಿ ಪ್ರತಿ ತಿಂಗಳಿಗೊಮ್ಮೆ ಮಾಡಿದರೆ ಬಹಳಷ್ಟು ಉತ್ತಮವಾಗುತ್ತದೆ ಎನ್ನುತ್ತಾರೆ ಯತೀಶ್.
ಕಾಡಾನೆಗಳ ಸಂಚಾರ ಮಾಮೂಲಿ: ಪ್ರತಿದಿನ ಬೆಳಗಿನಿಂದ ತೋಟದಲ್ಲಿ ಕೆಲಸ ನಿರ್ವಹಿಸುತ್ತಾರೆ. ತೋಟಕ್ಕೆ ನೀರು ಹಾಯಿಸುತ್ತಾರೆ. ಕಾಡಾನೆಗಳ ಹಾವಳಿ ನಡುವೆ ರಾತ್ರಿಯೂ ಕೆಲಸ ನಿರ್ವಹಿಸುತ್ತಾರೆ. ತೋಟಕ್ಕೆ ತೆರಳುವ ಸಂದರ್ಭದಲ್ಲಿ ಅನೇಕ ಬಾರಿ ಕಾಡಾನೆಗಳು ಕಾಣಲು ಸಿಕ್ಕಿದ್ದು, ಅದನ್ನು ಭಯಪಡಿಸದಿದ್ದರೆ ಅದು ಏನೂ ಮಾಡುವುದಿಲ್ಲ. ಕೆಲವರು ಅದನ್ನು ಭಯಗೊಳಿಸುತ್ತಾರೆ. ನಮ್ಮ ತೋಟದಲ್ಲಿ ಕಾಡಾನೆಗಳ ಸಂಚಾರ ಮಾಮೂಲಿಯಾಗಿದೆ ಎನ್ನುತ್ತಾರೆ ಯತೀಶ್.
ಕೃಷಿ ಕೆಲಸದ ಜತೆಗೆ ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ, ಇದೀಗ ನಿರ್ದೇಶಕರಾಗಿದ್ದಾರೆ. ಜತೆಗೆ ಪ್ಲಾಂಟರ್ಸ್ ಕ್ಲಬ್ ಸದಸ್ಯರಾಗಿ ಜತೆಗೆ ಅನೇಕ ಕೃಷಿ ಚಟುವಟಿಕೆಗೆ ಪೂರಕವಾದ ಅನೇಕ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜತೆಗೆ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಬಿ.ಕೆ.ಯತೀಶ್.
ಕಾರ್ಮಿಕರ ವೇತನ, ರಸಗೊಬ್ಬರ ಬೆಲೆ ಗಗನಕ್ಕೇರುತ್ತಿರುವುದು, ಹವಾಮಾನದ ವೈಫಲ್ಯದಿಂದಾಗಿ ಕೃಷಿ ದುಸ್ತರವಾಗುತಿದೆ. ಆದರೂ ದೃತಿಗೆಡದೆ ವಿಲಾಸಿ ಜೀವನ ಮಾಡದೆ ಸರಳ ಜೀವನ ನಡೆಸಿದರೆ ಕೃಷಿ ಎಲ್ಲ ವೃತ್ತಿಗಿಂತ ಒಳ್ಳೆಯದು, ಬೆಳೆಗಾರರೂ ಕಾರ್ಮಿಕರ ಜತೆಯಲ್ಲಿ ನಿಂತು ತಾವು ಕೆಲಸ ನಿರ್ವಹಿಸಬೇಕು, ಕಾಫಿ ತೋಟದ ಕೆಲಸಗಳಿಗೆ ನುರಿತ ಕೆಲಸಗಾರರ ಅವಶ್ಯಕತೆ ಇದೆ. ಬೇರೆ ಬೇರೆ ರೈತರಿಂದ ಮಾಹಿತಿ ಪಡೆಯಬೇಕು. ನಾನು ಹಾಗೂ ಸಹೋದರ ನಮ್ಮ ತೋಟ ಅಭಿವೃದ್ಧಿಪಡಿಸಲು ಪಣ ತೊಟ್ಟು ಕೆಲಸ ಮಾಡಿದೆವು, ಇದರಿಂದ ಉತ್ತಮ ಆರೋಗ್ಯ ಸೇರಿದಂತೆ ನೆಮ್ಮದಿಯ ಬದುಕು ನಮ್ಮದಾಗಿದೆ.
ಸಮಯಕ್ಕೆ ಸರಿಯಾಗಿ ಎಲ್ಲ ಕೆಲಸ ಮಾಡಬೇಕು, ಕಾಫಿ ತೋಟಕ್ಕೆ ನೀರಿನ ವ್ಯವಸ್ಥೆ ಇರಬೇಕು, ಇದರಿಂದ ಉತ್ತಮ ಆದಾಯ ಗಳಿಸಬಹುದು. ತೋಟಕ್ಕೆ ನೀರು ಹಾಯಿಸಲು ಸ್ಪ್ರಿಂಕ್ಲರ್ ವ್ಯವಸ್ಥೆ ಮಾಡಲಾಗಿದೆ. ಮೋಟಾರ್ ಆನ್ ಮಾಡಿದರೆ ಎಲ್ಲ ಭಾಗಕ್ಕೂ ಒಂದೇ ಮಾದರಿಯಲ್ಲಿ ನೀರು ಸರಬರಾಜಾಗುತ್ತದೆ, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವಂತೆ ಕೆಲಸ ನಿರ್ವಹಿಸಬೇಕು.