ಚಿಕ್ಕಕೊಳತ್ತೂರು ಉದ್ಭವ ಬಾವಿ ಬಸವಣ್ಣ ದೇವರ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಭಕ್ತರು. 
ಕೊಡಗು

ಉದ್ಭವ ಬಾವಿ ಬಸವಣ್ಣ ದೇವರ ವಾರ್ಷಿಕೋತ್ಸವ

ಶನಿವಾರಸಂತೆ: ಸಮೀಪದ ಚಿಕ್ಕಕೊಳತ್ತೂರು ಗ್ರಾಮದ ಶ್ರೀಉದ್ಬವ ಬಾವಿ ಬಸವಣ್ಣ ದೇವರ ವಾರ್ಷಿಕ ಪೂಜಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಶನಿವಾರಸಂತೆ ಸೇರಿದಂತೆ ಅಕ್ಕಪಕ್ಕ ಗ್ರಾಮಗಳಿಂದ ಮತ್ತು ಹಾಸನ ಜಿಲ್ಲೆಗೆ ಸೇರಿದ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಇಲ್ಲಿನ ಕಲ್ಯಾಣಿಯಲ್ಲಿ ವರ್ಷಪೂರ್ತಿ ನೀರು ತುಂಬಿರುತ್ತದೆ. ಕಲ್ಯಾಣಿ ಮಧ್ಯದಲ್ಲಿ ಬಸವಣ್ಣ ಉದ್ಭವಗೊಂಡಿರುವ ಹಿನ್ನೆಲೆಯಲ್ಲಿ ನೂರಾರು ವರ್ಷಗಳಿಂದ ಇದನ್ನು ಉದ್ಭವ ಬಸವಣ್ಣ ದೇವರು ಎಂದು ಕರೆಯಲಾಗುತ್ತದೆ. ಪ್ರತಿವರ್ಷ ಉದ್ಭವ ಬಸವಣ್ಣ ದೇವರಿಗೆ ವಾರ್ಷಿಕ ಪೂಜೆ ನೆರವೇರಿಸಿಕೊಂಡು ಬರಲಾಗುತ್ತಿದೆ. ಉದ್ಭವ ಮೂರ್ತಿಯಿಂದ ಹರಿದು ಬರುವ ಜಲ ಕಲ್ಯಾಣಿಯನ್ನು ಸೇರುತ್ತದೆ. ನಂತರ ಇದು ಚಿಕ್ಕ ಹೊಳೆಯೊಂದಕ್ಕೆ ಸೇರುತ್ತದೆ. ವಿಶೇಷ ಎಂದರೆ ಇಲ್ಲಿನ ಕಲ್ಯಾಣಿಯಲ್ಲಿರುವ ನೀರು ಎಷ್ಟೇ ಬರಗಾಲ ಬಂದ ಸಂದರ್ಭದಲ್ಲೂ ಬತ್ತಿ ಹೋಗುವುದಿಲ್ಲ.
ವಿಶೇಷತೆ: ವಾರ್ಷಿಕ ಪೂಜಾ ಮಹೋತ್ಸವಕ್ಕೆ ಆಗಮಿಸುವ ಭಕ್ತರು ಕಲ್ಯಾಣಿಗೆ ಹಾಕುವ ನಾಣ್ಯಗಳನ್ನು ಮುಂದಿನ ವರ್ಷದಲ್ಲಿ ನಡೆಯುವ ವಾರ್ಷಿಕ ಪೂಜೆಯ ಖರ್ಚಿಗೆ ಬಳಸಿಕೊಳ್ಳುತ್ತಾರೆ. ಸುತ್ತಮುತ್ತಲಿನ ವ್ಯಾಪ್ತಿಯಲ್ಲಿರುವ ಜಾನುವಾರುಗಳನ್ನು ಬಾವಿ ಬಸವಣ್ಣ ದೇವರು ರಕ್ಷಿಸುತ್ತಾನೆ ಎಂಬ ಪ್ರತೀತಿ ಇದೆ. ಪೂಜಾ ದಿನದಂದು ಗ್ರಾಮದ ಮನೆಗಳಿಂದ ಅಕ್ಕಿ, ಬೆಲ್ಲ, ತರಕಾರಿ, ತೆಂಗಿನಕಾಯಿಯನ್ನು ಪ್ರಸಾದ ತಯಾರಿಕೆಗೆ ಬಳಸಲಾಗುತ್ತದೆ. ಹರಕೆ ಹೊತ್ತ ಭಕ್ತರು ವಾರ್ಷಿಕ ಪೂಜೆಯಲ್ಲಿ 101 ತೆಂಗಿನಕಾಯಿ ಒಡೆಯುವ ಮೂಲಕ ಹರಕೆ ತೀರಿಸುತ್ತಾರೆ. ಚಿಕ್ಕ ಮಕ್ಕಳ ಮುಡಿ ತೆಗೆಯುವ ಕಾರ್ಯವನ್ನು ಶಾಸ್ತ್ರೋಕ್ತವಾಗಿ ಹರಕೆ ರೂಪದಲ್ಲಿ ನೆರವೇರಿಸುತ್ತಾರೆ. ಇಲ್ಲಿಂದ ಹೊರ ಊರುಗಳಿಗೆ ವಿವಾಹ ಮಾಡಿಕೊಟ್ಟಿರುವ ಹೆಣ್ಣು ಮಕ್ಕಳು ತವರಿಗೆ ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುವುದು ವಿಶೇಷ ಆಚರಣೆಯಾಗಿದೆ.
ಸೋಮವಾರ ಬೆಳಗ್ಗೆಯಿಂದ ಸಂಜೆ 4 ಗಂಟೆಯ ತನಕ ಭಕ್ತರು ಆಗಮಿಸಿದರು. ಮಧ್ಯಾಹ್ನ ಭಕ್ತರಿಗೆ ದೇವಸ್ಥಾನ ಸಮಿತಿಯಿಂದ ಅನ್ನಸಂತರ್ಪಣೆ ನಡೆಯಿತು.