ಕುಶಾಲನಗರದ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಆವರಣದಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಚ್.ವಿ.ಶಿವಪ್ಪ, ಕೆ.ಎಸ್.ಮೂರ್ತಿ, ದೀಪಿಕಾ ಕರುಣ, ಎಸ್.ನಂದೀಶ್, ಎಚ್.ಎಂ.ಮಧುಸೂದನ್, ಧರ್ಮೇಂದ್ರ, ಕಮಲಾ ಇತರರಿದ್ದರು.
- ಸಮಾಜದ ಸಂಘಟಕ, ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ
- ಶಾಮನೂರು ಶಿವಶಂಕರಪ್ಪ
- ನಿಧನ ನಾಡಿಗೆ ತುಂಬಲಾರದ ನಷ್ಟ
ಕುಶಾಲನಗರ: ನಾಡು ಕಂಡ ಅಪರೂಪದ ರಾಜಕಾರಣಿ, ಶಿಕ್ಷಣ ಪ್ರೇಮಿ, ಸಮಾಜದ ಸಂಘಟಕ, ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ವೀರಶೈವ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಹೇಳಿದರು.
ಇಲ್ಲಿನ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಶಿವಶಂಕರಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಅವರದ್ದೇ ಆದ ಕಲ್ಪನೆಯಲ್ಲಿ ದಾವಣಗೆರೆ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದ್ದಲ್ಲದೆ, 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತೆರೆದು ಹಲವಾರು ಜನರ ಜೀವನಕ್ಕೆ ಬೆಳಕಾದರು ಎಂದು ಸ್ಮರಿಸಿದರು.
ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸಾಂಭಶಿವಯ್ಯ ಮಾತನಾಡಿ, ವೀರಶೈವ ಸಮಾಜದಲ್ಲಿ ಗುಂಪುಗಳಾಗದಂತೆ ಶಾಮನೂರು ಎಚ್ಚರಿಕೆ ವಹಿಸಿದ್ದರು. ಇಳಿ ವಯಸ್ಸನ್ನೂ ಲೆಕ್ಕಿಸದೆ ದಾವಣಗೆರೆಯಲ್ಲಿ ಪಂಚಪೀಠಗಳ ಶ್ರೀಗಳನ್ನು ಒಂದೆಡೆ ಸೇರಿಸಿ ನಡೆಸಿದ ಬೃಹತ್ ಸಮಾವೇಶ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ದಾವಣಗೆರೆ ಜಿಲ್ಲೆಯ ಅಜ್ಜಾ ಎಂದೇ ಖ್ಯಾತರಾಗಿದ್ದ ಶಾಮನೂರರ ಶೈಕ್ಷಣಿಕ, ಔದ್ಯೋಗಿಕ ಕ್ರಾಂತಿ ಅವಿಸ್ಮರಣೀಯ. ಎಲ್ಲ ಜಾತಿಯವರಿಗೂ ಸಹಾಯ ಹಸ್ತ ನೀಡುತ್ತಿದ್ದರು. ಲಿಂಗಾಯತ, ವೀರಶೈವ ಸಮಾಜದ ಶಕ್ತಿಯಾಗಿದ್ದ ಶಾಮನೂರು ಸಂತನಂತೆ ಬದುಕು ನಡೆಸಿ ಮರೆಯಾಗಿದ್ದು ಸಮಾಜಕ್ಕೆ ತುಂಬಲಾಗದ ನಷ್ಟ ಎಂದರು.
ವೀರಶೈವ ಸಮಾಜದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೀಪಿಕಾ ಕರುಣ, ವೀರಶೈವ ಸಮಾಜದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ನಂದೀಶ್, ಕುಶಾಲನಗರ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎಂ.ಮಧುಸೂದನ್, ಕಾರ್ಯದರ್ಶಿ ಧರ್ಮೇಂದ್ರ, ಅಕ್ಕನ ಬಳಗದ ಅಧ್ಯಕ್ಷೆ ಕಮಲಾ ಉದಯಕುಮಾರ್, ಪ್ರಮುಖರಾದ ಮನುದೇವಿ, ಲೇಖನಾ ಧರ್ಮೇಂದ್ರ, ಮಮತಾ ರವೀಶ್, ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಬಿ.ನಟರಾಜು, ಬಸವೇಶ್ವರ ಸಹಕಾರ ಸಂಘದ ಉಪಾಧ್ಯಕ್ಷ ಎಚ್.ಪಿ.ಉದಯಕುಮಾರ್, ಸಿಇಒ ಬಸವಣ್ಣಯ್ಯ, ದಯಾನಂದ ಇದ್ದರು.