ಮಡಿಕೇರಿ ನಗರಸಭೆ ವಾರ್ಡ್ ನಂ. 19ರಲ್ಲಿ ಇರುವ ತೋಡನ್ನು ಜೆಸಿಬಿ ಬಳಸಿ ಸ್ವಚ್ಛಗೊಳಿಸಲಾಯಿತು. 
ಕೊಡಗು

ನಗರಸಭೆಯಿಂದ ಚರಂಡಿ ಸ್ವಚ್ಛತೆ

ಮಡಿಕೇರಿ:
ಮಡಿಕೇರಿ ನಗರಸಭೆ ವಾರ್ಡ್ ನಂ. 19ರಲ್ಲಿ ರಸ್ತೆ ಮತ್ತು ಮೋರಿ ನಿರ್ಮಾಣಕ್ಕೆ ನಗರಸಭೆಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ದೂರಿಕೊಂಡಿದ್ದರೆ ಬಗ್ಗೆ ನಂ1 ಪತ್ರಿಕೆ ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ವರದಿಗೆ ಸ್ಪಂದಿಸಿದ ಮಡಿಕೇರಿ ನಗರಸಭೆ ಸಿಬ್ಬಂದಿ ಶುಕ್ರವಾರ ಮತ್ತು ಶನಿವಾರ ತೋಡನ್ನು ಸ್ವಚ್ಛಗೊಳಿಸಿದ್ದಾರೆ. ಇದಕ್ಕೂ ಮೊದಲು ಪತ್ರಿಕೆಯಲ್ಲಿ ವರದಿ ಗಮನಿಸಿದ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೂಡಲೇ ಕ್ರಮತೆಗೆದುಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದ್ದರು.
ಕಳೆದ 3 ವರ್ಷಗಳಿಂದ ಸ್ವಚ್ಚಗೊಳ್ಳದ ತೋಡನ್ನು ಅಧ್ಯಕ್ಷೆ ಪಿ. ಕಲಾವತಿ ಖುದ್ದಾಗಿ ನಿಂತು ಜೆಸಿಬಿ ಮೂಲಕ ಶನಿವಾರವೂ ಸ್ವಚ್ಚಗೊಳಿಸುವ ಕೆಲಸ ನಡೆಸಿದ್ದಾರೆ. ಈ ತೋಡು ಕನ್ನಿಕಾ ಲೇ ಔಟ್ ಮತ್ತು ರೈಪಲ್ ರೇಂಜ್ ಮುಖಾಂತರ ಹರಿದು ರಾಜಕಾಲುವೆ ಸೇರುತ್ತಿತ್ತು. ಇದನ್ನು ಸ್ವಚ್ಚಗೊಳಿಸಿದ ಕಾರಣ ಮುಂದೆ ಆಗುತ್ತಿದ್ದ ಭಾರಿ ಅನಾಹುತ ತಪ್ಪಿದೆ. ಹಾಗಾಗಿ ಅಧ್ಯಕ್ಷರ ಕಾರ್ಯವೈಖರಿ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.