ಕುಶಾಲನಗರದ ರೋಟರಿ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರವನ್ನು ಎಲ್.ಚೈತ್ರಾ ಉದ್ಘಾಟಿಸಿದರು. ಮಂಡೇಪಂಡ ಮೊಣ್ಣಪ್ಪ, ಮನು ಪೆಮ್ಮಯ್ಯ, ಕೆ.ಬಿ.ಮೋಹನ್, ವಿಶ್ವಜ್ಞ ಇದ್ದರು.
- ಕುಶಾಲನಗರ ನ್ಯಾಯಾಲಯದ ನ್ಯಾಯಾಧೀಶೆ ಎಲ್.ಚೈತ್ರಾ
- ರೋಟರಿ ಸಂಸ್ಥೆ ಸಭಾಂಗಣ
ಕುಶಾಲನಗರ: ಕುಟುಂಬ, ಮಕ್ಕಳು ಹಾಗೂ ಸಮಾಜದಿಂದ ಹಿರಿಯ ನಾಗರಿಕರ ಕಡೆಗಣನೆ ಸಲ್ಲದು ಎಂದು ಕುಶಾಲನಗರ ನ್ಯಾಯಾಲಯದ ನ್ಯಾಯಾಧೀಶೆ ಎಲ್.ಚೈತ್ರಾ ಹೇಳಿದರು.
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ರಾಜ್ಯ ಸರ್ಕಾರದ ಅಂಗವಿಕಲರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಸೋಮವಾರ ಇಲ್ಲಿನ ರೋಟರಿ ಸಂಸ್ಥೆ ಸಭಾಂಗಣದಲ್ಲಿ ಹಿರಿಯ ನಾಗರಿಕರಿಗೆ ಆಯೋಜಿಸಿದ್ದ ಕಾನೂನು ಅರಿವು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ನಾಗರಿಕರನ್ನು ಸಮಾಜ ಹಾಗೂ ಕುಟುಂಬ ಅತ್ಯಂತ ವಿನಯ ಹಾಗೂ ಗೌರವದಿಂದ ಕಾಣಬೇಕಿದೆ ಎಂದು ಹೇಳಿದರು.
ಹಿರಿಯ ನಾಗರಿಕರು ತಮ್ಮಲ್ಲಿನ ಸ್ಥಿರ ಅಥವಾ ಚರಾಸ್ತಿಗಳ ವಿಲೇವಾರಿ ಸಂದರ್ಭ ಮುಂದಾಲೋಚನೆ ಮಾಡಬೇಕು. ಗಿಫ್ಟ್ ಅಥವಾ ಸೇಲ್ಸ್ ಡೀಡ್‌ಗಳ ಸಂದರ್ಭ ಅಗತ್ಯವಿರುವ ಉಚಿತ ಮಾಹಿತಿಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಜಿ.ವಿಮಲಾ ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯ ನಾಗರಿಕರ ಬಗ್ಗೆ ಅವರ ಕುಟುಂಬದ ಸದಸ್ಯರು ಅಥವಾ ಸಮಾಜ ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದರು.
ಹಿರಿಯ ನಾಗರಿಕರು ತಮಗೆ ಸಂಕಷ್ಟದ ಸ್ಥಿತಿ ಎದುರಾದಲ್ಲಿ ಅನುಸರಿಸಬೇಕಾದ ಕ್ರಮಗಳು, ಸರ್ಕಾರದ ನೆರವು, ವಿವಿಧ ಇಲಾಖೆಗಳ ಸೌಲಭ್ಯಗಳ ಕುರಿತು ಕುಶಾಲನಗರದ ವಕೀಲರ ಸಂಘದ ಕಾರ್ಯದರ್ಶಿ ಕೆ.ಬಿ.ಮೋಹನ್ ಮಾಹಿತಿ ನೀಡಿದರು. ಕುಶಾಲನಗರದ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮಂಡೇಪಂಡ ಮೊಣ್ಣಪ್ಪ, ಕುಶಾಲನಗರ ರೋಟರಿ ಸಂಸ್ಥೆ ಅಧ್ಯಕ್ಷ ಮನು ಪೆಮ್ಮಯ್ಯ, ಆರೋಗ್ಯ ಇಲಾಖೆಯ ಹಿರಿಯ ಉಪನಿರೀಕ್ಷಕ ವಿಶ್ವಜ್ಞ ಮಾತನಾಡಿದರು. ಪೋಲೀಸ್ ಇಲಾಖೆಯ ಸಹಾಯಕ ಉಪ ನಿರೀಕ್ಷಕಿ ನಂದಾ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಟಿ.ಆರ್.ಹರೀಶ್, ಅಂಗನವಾಡಿ ಕಾರ್ಯಕರ್ತೆ ಚಂದ್ರಿಕಾ ಇತರರಿದ್ದರು.