ಸೋಮವಾರಪೇಟೆ ಇನ್ನರ್ ವ್ಹೀಲ್ ಕ್ಲಬ್ ಪದಾಧಿಕಾರಿಗಳು ಮತ್ತು ಜ್ಞಾನವಿಕಾಸ ಶಾಲೆಯ ಮಕ್ಕಳು ಮೀಸಲು ಅರಣ್ಯದಲ್ಲಿ ಬೀಜದ ಉಂಡೆಗಳನ್ನು ಎಸೆದು, ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು. ಲತಾ ಇತರರಿದ್ದರು. ಯಲಕನೂರು ಅರಣ್ಯದಲ್ಲಿ ಬೀಜದುಂಡೆ
ಕೊಡಗು

ಪರಿಸರ ರಕ್ಷಣೆಗೆ ಎಲ್ಲರೂ ಕೈಜೋಡಿಸಿ

ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಲತಾ ಸಲಹೆ

ಸೋಮವಾರಪೇಟೆ: ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಮತ್ತು ಜ್ಞಾನವಿಕಾಸ ಶಾಲೆ ವತಿಯಿಂದ ಈಚೆಗೆ ಯಲಕನೂರು ಅರಣ್ಯ ಪ್ರದೇಶದಲ್ಲಿ ಬೀಜದುಂಡೆ ಎಸೆಯುವ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ವಿದ್ಯಾರ್ಥಿಗಳು ಬೀಜದುಂಡೆಗಳನ್ನು ಎಸೆದರು. ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಲತಾ ಮಂಜು ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆ ಜವಾಬ್ದಾರಿಯಲ್ಲ. ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಿ, ಹಸಿರು ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.

ಜೀವವೈವಿಧ್ಯದ ನೆಲೆ: ಅರಣ್ಯಗಳು ಜೀವವೈವಿಧ್ಯದ ನೆಲೆಗಳಾಗಿದ್ದು, ಮಣ್ಣು ಮತ್ತು ಜಲಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅರಣ್ಯ ನಾಶದಿಂದ ಪರಿಸರದ ಸಮತೋಲನಕ್ಕೆ ಧಕ್ಕೆಯಾಗುವುದರ ಜತೆಗೆ ವನ್ಯಜೀವಿಗಳ ಆವಾಸಸ್ಥಾನಕ್ಕೂ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಬೀಜದ ಉಂಡೆಗಳನ್ನು ಅರಣ್ಯ ಪ್ರದೇಶದಲ್ಲಿ ಹರಡುವ ಮೂಲಕ ಸಸಿಗಳ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ ಎಂದು ಲತಾ ಮಂಜು ತಿಳಿಸಿದರು.

ಪ್ರಕೃತಿಯ ಉಳಿವು ಮಾನವ ಕುಲದ ಉಳಿವಿನೊಂದಿಗೆ ಬೆಸೆದುಕೊಂಡಿದೆ. ಪ್ರತಿಯೊಬ್ಬರೂ ಗಿಡಮರಗಳನ್ನು ಬೆಳೆಸುವುದು, ಅರಣ್ಯ ಸಂರಕ್ಷಿಸುವುದು ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಕೊಡುಗೆಯಾಗಿ ನೀಡಬೇಕು ಎಂದು ಸಲಹೆ ನೀಡಿದರು. ಕ್ಲಬ್‌ನ ಪದಾಧಿಕಾರಿಗಳಾದ ನಂದಿತಾ ವಿರೇಂದ್ರ, ಲತಾ ನಾಗೇಶ್, ಮುಖ್ಯಶಿಕ್ಷಕಿ ಎಂ.ಜೆ.ಅಣ್ಣಮ್ಮ ಇತರರು ಇದ್ದರು.