ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ 7 ಅಡಿಗಳಷ್ಟು ಇಳಿದಿದೆ 
ಕೊಡಗು

ಕೊಡಗಿನಲ್ಲಿ ನೆತ್ತಿ ಸುಡುತ್ತಿದೆ ರಣಬಿಸಿಲು

ಸುನಿಲ್ ಪೊನ್ನೇಟಿ
ಮಡಿಕೇರಿ
ಮಳೆಯ ನಾಡು, ಜೀವನದಿ ಕಾವೇರಿ ಸೇರಿದಂತೆ ಹಲವು ನದಿಗಳ ತವರು ಕೊಡಗಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲೇ ಬಿರು ಬೇಸಿಗೆಯ ಅನುಭವ ಆಗುತ್ತಿದೆ. ಬೆಳಗ್ಗೆ 11 ಗಂಟೆಯಿAದಲೇ ಹೊರಗೆ ತಿರುಗಾಡಲು ಆಗದಷ್ಟು ಬಿಸಿಲಿನ ಝಳ ನೆತ್ತಿ ಸುಡುತ್ತಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆಗಳಿವೆ. ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿಯಲ್ಲಿ ಈಗಲೇ ನೀರಿನ ಮಟ್ಟ 7 ಅಡಿಗಳಷ್ಟು ಕಡಿಮೆ ಆಗಿದೆ.
ಭಾರತದ ಸ್ಕಾಟ್‌ಲ್ಯಾಂಡ್ ಎಂದೇ ಕರೆಯಲಾಗುವ ಕೊಡಗು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಅಕ್ಟೋಬರ್ ಮೊದಲ ವಾರದ ತನಕವೂ ಮಳೆ ಸುರಿಯುವುದು ವಾಡಿಕೆ. ಆದರೆ ಈ ವರ್ಷ ಹವಾಮಾನ ಸಂಪೂರ್ಣ ಬದಲಾಗಿದೆ. ಮಳೆಗಾಲದ ಅವಧಿಯಲ್ಲಿ ಮಳೆಯ ಕೊರತೆ ಕಾಡುವುದರ ಜತೆಗೆ ಸೆಪ್ಟಂಬರ್ ತಿಂಗಳಿನಲ್ಲೇ ಬೇಸಿಗೆಯಂತೆ ಭಾಸವಾಗುತ್ತಿದೆ. ಜಿಲ್ಲೆಯ ಹಲವೆಡೆ ಈ ಅವಧಿಯಲ್ಲೂ ರಾತ್ರಿ ವೇಳೆ ಮಲಗುವಾಗ ಫ್ಯಾನ್ ಅಥವಾ ಎಸಿ ಚಾಲೂ ಮಾಡುವ ಅನಿವಾರ್ಯತೆ ಎದುರಾಗಿದೆ. ಮೊದಲೆಲ್ಲಾ ಬೇಸಿಗೆಯಲ್ಲಿ 30-35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು 18-21 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಕಂಡುಬರುತ್ತಿದ್ದ ಜಿಲ್ಲೆಯಲ್ಲಿ ಈಗ ಮಳೆಗಾಲದಲ್ಲೇ ಇಷ್ಟು ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗುತ್ತಿದೆ.
ಕೊಡಗು ಪಶ್ಚಿಮ ಘಟ್ಟಗಳ ಮಲೆನಾಡು ಪ್ರದೇಶದಲ್ಲಿರುವುದರಿಂದ ಇಲ್ಲಿನ ಹವಾಮಾನ ವರ್ಷವಿಡೀ ಹಿತಕರವಾಗಿ ಇರುತ್ತಿತ್ತು. ಕೊಡಗಿನ ಸರಾಸರಿ ಉಷ್ಣಾಂಶ ಸಾಮಾನ್ಯವಾಗಿ 15 ಡಿಗ್ರಿ ಸೆಲ್ಸಿಯಸ್‌ನಿಂದ 28 ಡಿಗ್ರಿ ಸೆಲ್ಸಿಯಸ್ ನಡುವೆ ದಾಖಲಾಗುತ್ತಿತ್ತಾದರೂ ಋತುಮಾನಕ್ಕೆ ಅನುಗುಣವಾಗಿ ಇದರಲ್ಲಿ ಅಲ್ಪ ಸ್ಚಲ್ಪ ಬದಲಾವಣೆಗಳು ಆಗುತ್ತಿದ್ದರೂ ಸಹಿಸಲು ಸಾಧ್ಯವಾಗದ ಪರಿಸ್ಥಿತಿಯೇನೂ ನಿರ್ಮಾಣ ಆಗುತ್ತಿರಲಿಲ್ಲ. ಅಕ್ಟೋಬರ್‌ನಿಂದ ಫೆಬ್ರವರಿ ಮಧ್ಯೆ ಚಳಿಗಾಲದಲ್ಲಿ ಗರಿಷ್ಠ ಉಷ್ಣತೆ 24ಡಿಗ್ರಿ ಸೆಲ್ಸಿಯಸ್‌ನಿಂದ 28 ಡಿ.ಸೆ. ತನಕ ಮತ್ತು ಕನಿಷ್ಠ ತಾಪಮಾನ 11 ಡಿ.ಸೆ.ನಿಂದ 15 ಡಿ.ಸೆ. ತನಕ ಇದ್ದರೆ, ಜೂನ್ - ಸೆಪ್ಟೆಂಬರ್ ಮಳೆಗಾಲದ ಅವಧಿಯಲ್ಲಿ ಗರಿಷ್ಠ 22-26 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 17-20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬರುತ್ತಿತ್ತು.
ಆದರೆ ಈ ವರ್ಷ ಸಾಮಾನ್ಯ ತಾಪಮಾನದಲ್ಲಿ ಏರಿಕೆ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಹೆಚ್ಚು ಮಳೆ ಬೀಳುವ ಭಾಗಮಂಡಲ, ತಲಕಾವೇರಿ, ನಾಪೋಕ್ಲು ಮಡಿಕೇರಿಯಂಥ ಪ್ರದೇಶದಲ್ಲಿ ಸ್ವಲ್ಪ ಸುಧಾರಿಸಬಹುದಾದಷ್ಟು ಉಷ್ಣಾಂಶ ಹಗಲಿನ ವೇಳೆಯಲ್ಲಿ ಇರುತ್ತದೆ. ಆದರೆ ಬಯಲು ಸೀಮೆಗೆ ಹೊಂದಿಕೊAಡಿರುವ ಕುಶಾಲನಗರ, ಸೋಮವಾರಪೇಟೆ ಭಾಗದಲ್ಲಿ ಧಗೆಯ ಪ್ರಮಾಣ ಹೆಚ್ಚು ಇದೆ. ವಿರಾಜಪೇಟೆ, ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲೂ ಸೂರ್ಯನ ಪ್ರಖರತೆ ಹೆಚ್ಚಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಸೆಪ್ಟೆಂಬರ್ 16ರಿಂದ ಸೆಪ್ಟೆಂಬರ್ 20ರ ಅವಧಿಯಲ್ಲಿ 31-32 ಡಿಗ್ರಿ ಸೆಲ್ಸಿಯಸ್ ಸರಾಸರಿ ಗರಿಷ್ಠ ತಾಪಮಾನ ಕೊಡಗಿನಲ್ಲಿ ಕಂಡು ಬರುವ ಸಾಧ್ಯತೆ ಇದೆ. ಸರಾಸರಿ ಕನಿಷ್ಠ ತಾಪಮಾನ 20-21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಈ ಅವಧಿಯಲ್ಲಿ ಮಳೆ ಆಗದಿರಬಹುದು ಎನ್ನುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಅಧಿಕಾರಿಗಳು, ಒಂದು ವೇಳೆ ಮಳೆ ಆದರೂ 0-7 ಮಿಮೀಗಳಷ್ಟು ಹಗುರ ಮಳೆಯಾಗುವ ಸಾಧ್ಯತೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಡಿಕೇರಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದರೂ ಮಳೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಂಜೆ ನಂತರ ಮಳೆ ಬರಬಹುದು ಎನ್ನುವ ನಿರೀಕ್ಷೆ ಹುಸಿ ಆಗುತ್ತಿದೆ. ಕಾವೇರಿ ಸೇರಿದಂತೆ ಜಿಲ್ಲೆಯಲ್ಲಿ ಹರಿಯುವ ನದಿಗಳಲ್ಲಿ ಈಗಾಗಲೇ ನೀರಿನ ಹರಿವಿನ ಮಟ್ಟ ಇಳಿಕೆ ಆಗಿದೆ. ಬಹುತೇಕ ಕೆರೆಗಳು ಭರ್ತಿ ಆಗಲೇ ಇಲ್ಲ. ಈಗಲೇ ಹೀಗೆ ಆದರೆ ಡಿಸೆಂಬರ್, ಜನವರಿ ನಂತರ ಪರಿಸ್ಥಿತಿ ಹೇಗಿರಬಹುದು ಎನ್ನುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ.
ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆಯೇ ಜಿಲ್ಲೆಯ ಜಲಮೂಲಗಳಲ್ಲಿ ನೀರಿನ ಹರಿವು ವೇಗವಾಗಿ ಕ್ಷೀಣವಾಗುತ್ತಿದೆ. ಕಾವೇರಿ ಸೇರಿದಂತೆ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಈಗಾಗಲೇ ಸಾಮಾನ್ಯಕ್ಕಿಂತ ಕಡಿಮೆ ಆಗಿದೆ. ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆ ಪಟ್ಟಣಗಳು ಕುಡಿಯುವ ನೀರಿಗಾಗಿ ಬಹುತೇಕ ನದಿ ನೀರನ್ನೇ ಅವಲಂಬಿಸಿವೆ. ಅದರಲ್ಲೂ ಜಿಲ್ಲೆಯ ದೊಡ್ಡ ಪಟ್ಟಣ ಕುಶಾಲನಗರಕ್ಕೆ ಕಾವೇರಿ ನದಿಯೇ ಪ್ರಮುಖ ನೀರಿನ ಮೂಲ. ಹಾಗಾಗಿ ನದಿಗಳಲ್ಲಿ ನೀರಿನ ಹರಿವು ಕ್ಷೀಣವಾದರೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಯಲ್ಲಿ ಈಗಲೇ ನೀರಿನ ಮಟ್ಟ ಸುಮಾರು 7 ಅಡಿಗಳಷ್ಟು ಕಡಿಮೆ ಆಗಿದೆ. 2859 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಗುರುವಾರದ ಮಾಹಿತಿ ಪ್ರಕಾರ 2852.70 ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ದಿನ 2858.39 ಅಡಿಗಳಷ್ಟು ನೀರಿತ್ತು. ಒಳಹರಿವು ತೀವ್ರ ಪ್ರಮಾಣದಲ್ಲಿ ಕುಸಿದಿದ್ದು, ಜಲಾಶಯಕ್ಕೆ ಕೇವಲ 241 ಕ್ಯೂಸೆಕ್ ಮಾತ್ರ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಈ ಸಮಯದಲ್ಲಿ 1197 ಕ್ಯೂಸೆಕ್ ಒಳಹರಿವು ಇತ್ತು. ಪ್ರಸ್ತುತ ನದಿಗೆ 1,320 ಕ್ಯೂಸೆಕ್ ಮತ್ತು ಕಾಲುವೆಗೆ 1 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಳೆದ ವರ್ಷ ನದಿ ಮತ್ತು ಕಾಲುವೆಗೆ ತಲಾ 800 ಕ್ಯೂಸೆಕ್ ನೀರು ಹರಿಸಲಾಗುತ್ತಿತ್ತು. 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 5.545 ಟಿಎಂಸಿ ಮಾತ್ರ ಬಳಕೆಗೆ ಯೋಗ್ಯ ನೀರಿದೆ. ಕಳೆದ ವರ್ಷ 7.543 ಟಿಎಂಸಿಯಷ್ಟು ನೀರಿನ ಸಂಗ್ರಹ ಇತ್ತು. ಕಳೆದ ವರ್ಷ ಜೂನ್ ಮತ್ತು ಸೆಪ್ಟೆಂಬರ್ ಹೀಗೆ 2 ಬಾರಿ ಅಣೆಕಟ್ಟೆ ಭರ್ತಿ ಆಗಿ ನದಿಗೆ ನೀರು ಹರಿಸಲಾಗಿತ್ತು.
"

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈ ವಾರದ ಮುನ್ಸೂಚನೆಯಂತೆ ಕೊಡಗು ಜಿಲ್ಲೆಯಲ್ಲಿ ಸೆ.16ರಿಂದ ಸೆ.20ರ ನಡುವಿನ ಅವಧಿಯಲ್ಲಿ ಸರಾಸರಿ ಗರಿಷ್ಠ ತಾಪಮಾನ 31-32 ಡಿಗ್ರಿ ಸೆಲ್ಸಿಯಸ್ ಮತ್ತು ಸರಾಸರಿ ಕನಿಷ್ಠ ತಾಪಮಾನ 20-21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಈ ಐದು ದಿನಗಳ ಅವಧಿಯಲ್ಲಿ ಮಳೆ ಆಗದಿರಬಹುದು. ಒಂದು ವೇಳೆ ಮಳೆ ಬಂದಲೂ 0-7 ಮಿಮೀಗಳಷ್ಟು ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ. ಭಾಗಶಃದಿಂದ ಹೆಚ್ಚು ಮೋಡ ಕವಿದ ವಾತಾವರಣ ಮತ್ತು ಕಡಿಮೆ ಅಥವಾ ಹಗುರ ಮಳೆ ನಿರೀಕ್ಷಿಸಲಾಗಿದೆ. ದಕ್ಷಿಣ ಭಾರತದಲ್ಲಿ ಮಳೆ ಸಾಮಾನ್ಯಕ್ಕಿಂತ ಕಡಿಮೆ ಆಗಲಿದೆ. ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ.

"

ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿರುವ ಕಾರಣ ಒಳಹರಿವು ಕ್ಷೀಣಿಸಿದೆ. ಸದ್ಯ ರೈತರಿಗೆ ಕಟ್ಟು ಪದ್ಧತಿ ಅಡಿಯಲ್ಲಿ ನೀರು ಕೊಡಲಾಗುತ್ತಿದೆ. ಮುಂದಿನ ಬೇಸಿಗೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಅಣೆಕಟ್ಟೆಯಲ್ಲಿ ನೀರನ್ನು ಕಾಪಾಡಿಕೊಳ್ಳುವ ಸವಾಲು ಕೂಡ ಇದೆ. ಒಂದು ವೇಳೆ ಮಳೆ ಬಂದರೆ ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದು.