ಗೋಣಿಕೊಪ್ಪ ಕೆವಿಕೆ ಕೇಂದ್ರದಲ್ಲಿ ರೈತರು ಮತ್ತು ಬೆಳೆಗಾರರಿಗೆ ಮಣ್ಣಿನ ಪೋಷಕಾಂಶ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ದೊರೈರಾಜ್, ನಂದಕುಮಾರ್ ಇದ್ದರು. 
ಕೊಡಗು

ಕಾಫಿ ಬೆಳೆಗಾರರಿಗೆ ವೈಜ್ಞಾನಿಕ ಕೃಷಿ ಜಾಗೃತಿ

ಗೋಣಿಕೊಪ್ಪ: ಕೃಷಿ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕ ಆಧಾರಿತ ಪೋಷಕಾಂಶ ಕುರಿತು ಕಾಫಿ ಬೆಳೆಗಾರರಿಗೆ ಜಾಗೃತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ 62 ಕಾಫಿ ಬೆಳೆಗಾರರು ಪಾಲ್ಗೊಂಡಿದ್ದರು. ವೈಜ್ಞಾನಿಕ ಆಧಾರಿತ ರಸಗೊಬ್ಬರ ಬಳಕೆ ಮಹತ್ವ, ಮಣ್ಣಿನ ಆರೋಗ್ಯ ಸುಧಾರಣೆ, ಸಸ್ಯಗಳ ರೋಗನಿರೋಧಕ ಶಕ್ತಿ ಹೆಚ್ಚಳ, ಉತ್ಪಾದಕತೆ ವೃದ್ಧಿ ಹಾಗೂ ಆಮದು ಅವಲಂಬನೆ ಕಡಿತ ಸಾಧ್ಯವಾಗುವುದನ್ನು ತಜ್ಞರು ವಿವರಣೆ ನೀಡಿದರು.
ವಿಶೇಷವಾಗಿ ಜೈವಿಕ ಗೊಬ್ಬರಗಳ ಬಳಕೆ ಮತ್ತು ವರ್ಮಿಕಾಂಪೋಸ್ಟ್, ಜೀವಾಮೃತ, ಪಂಚಗವ್ಯ, ನೀಂ ಕೇಕ್, ಹೊಂಗೆ ಕೇಕ್, ಟ್ರೈಕೋಡರ್ಮಾ ಇವುಗಳನ್ನು ಬಳಸಿ ಮಣ್ಣಿನ ಆರ್ಗ್ಯಾನಿಕ್ ಕಾರ್ಬನ್, ಜೀವ ವೈವಿಧ್ಯತೆಯನ್ನು ಹೆಚ್ಚಿಸಬಹುದು ಎಂದು ತಿಳಿಸಲಾಯಿತು. ಸೂಕ್ಷ್ಮ ಪೋಷಕಾಂಶಗಳ ಮಹತ್ವವನ್ನು ವಿವರಿಸಿ, ಹಿಡನ್ ಹಂಗರ್ ಸಮಸ್ಯೆ ತಪ್ಪಿಸಲು ಮತ್ತು ಸಮತೋಲನ ಪೋಷಣೆಯನ್ನು ಒದಗಿಸಲು ಮಾಹಿತಿ ನೀಡಲಾಯಿತು.
ಪೊನ್ನಂಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ದೊರೈರಾಜ್, ಕೊಡಗು ಕೃಷಿ ಇನ್‌ಪುಟ್ ಡೀಲರ್ಸ್ ಸಂಘದ ಅಧ್ಯಕ್ಷ ನಂದಕುಮಾರ್, ಕೇಂದ್ರದ ವಿಜ್ಞಾನಿಗಳು, ಸಿಬ್ಬಂದಿ ಇದ್ದರು.