ನಿಡ್ತ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಸರಳ ಪ್ರಯೋಗಗಳ ಮೂಲಕ ಮುಖ್ಯಶಿಕ್ಷಕಿ ನಳಿನಿ ಉದ್ಘಾಟಿಸಿದರು. ಶಿಕ್ಷಕರಾದ ಮಧುಕುಮಾರ್, ಜಗದೀಶ್, ಎಂ.ವಿ.ರೂಪಾ, ಗೀತಾ ಇತರರು ಇದ್ದರು.
ಶನಿವಾರಸಂತೆ: ಸಮೀಪದ ನಿಡ್ತ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಸರಳ ಪ್ರಯೋಗಳನ್ನು ಮಾಡುವ ಮೂಲಕ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮಹತ್ವ ತಿಳಿಸಿದರು. ‘ವಿಜ್ಞಾನದಲ್ಲಿ ಮಹಿಳೆಯರು, ವೇಗವರ್ಧಿತ ವಿಕಸಿತ ಭಾರತ’ ಎಂಬ ಥೀಮ್ ಶೀರ್ಷಿಕೆ ಅಡಿ ಪ್ರತ್ಯಾಮ್ಲದಲ್ಲಿ ಬರೆದ ಕಾರ್ಯಕ್ರಮದ ಹೆಸರಿಗೆ ಅರಿಶಿಣ ಹಚ್ಚುವ ಮೂಲಕ ಶಾಲಾ ಮುಖ್ಯ ಶಿಕ್ಷಕಿ ಎಂ.ಪಿ.ನಳಿನಿ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ನೀರಿನಲ್ಲಿರುವ ಮೇಣದ ಬತ್ತಿಗೆ ಅಡುಗೆ ಸೋಡಾ ಹಾಕಿದರೆ ದೀಪ ನಂದಿ ಹೋಗುತ್ತದೆ
ಎಂಬುದನ್ನು ತೋರಿಸಿಕೊಟ್ಟ ವಿದ್ಯಾರ್ಥಿಗಳು ಇದರ ಹಿಂದಿನ ವೈಜ್ಞಾನಿಕ ಕಾರಣವನ್ನೂ ವಿವರಿಸಿದರು. ಕೋಳಿ ಮೊಟ್ಟೆಯು ನೀರಿನಲ್ಲಿ ತೇಲಲು ವೈಜ್ಞಾನಿಕ ಕಾರಣ ಏನು ಎಂಬುದನ್ನು ಸರಳ ಪ್ರಯೋಗದ ಮೂಲಕ ವಿವರಿಸಿದರು.
ವಿಜ್ಞಾನ ಶಿಕ್ಷಕ ಜಗದೀಶ್, ವಿಜ್ಞಾನ ದಿನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿಜ್ಞಾನ ಶಿಕ್ಷಕ ಡಿ.ಎಸ್.ಮಧುಕುಮಾರ್ ವಿದ್ಯಾರ್ಥಿಗಳಿಗೆ ಪತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭ ಶಿಕ್ಷಕರಾದ ಮಾರುತಿ ಅರೇರ, ಎಂ.ವಿ.ರೂಪಾ, ವಿ.ಡಿ.ಮಹಾದೇವಿ, ಗೀತಾ ಹಾಜರಿದ್ದರು. ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದ್ದು ಗಮನ ಸೆಳೆಯಿತು.