ಕುಶಾಲನಗರ:
ಸರ್ಕಾರಿ ಶಾಲೆಗಳ ಪ್ರಗತಿಯಲ್ಲಿ ಪೋಷಕರು, ಗ್ರಾಮಸ್ಥರು ಹಾಗೂ ಸಮುದಾಯದ ಪಾತ್ರ ಅತ್ಯಂತ ಪ್ರಮುಖವಾದುದು ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ.ಸೌಮ್ಯ ಹೇಳಿದರು. ಕುಶಾಲನಗರ ತಾಲೂಕು ಕೂಡುಮಂಗಳೂರು ( ಕೂಡ್ಲೂರು ) ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಸಮುದಾಯದತ್ತ ಶಾಲಾ ಕಾರ್ಯಕ್ರಮ ಹಾಗೂ ಪೋಷಕರ ಸಭೆಯಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗಳ ಪ್ರಗತಿಗೆ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಯೊಂದಿಗೆ ಪೋಷಕರು, ಗ್ರಾಮಸ್ಥರು ಮತ್ತು ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಹಾಗೂ ಆದುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ನಡೆಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಶಾಲೆಯ ಮೂಲಸೌಕರ್ಯ ಅಭಿವೃದ್ಧಿ, ಮಕ್ಕಳ ದಾಖಲಾತಿ ಹೆಚ್ಚಳ, ಶಾಲಾ ಪರಿಸರ ಅಭಿವೃದ್ಧಿ ಸೇರಿದಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹಾಗೂ ಶಾಲಾಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡುವ ಮೂಲಕ ಸರ್ಕಾರಿ ಶಾಲೆಗಳ ಉಳಿವು ಹಾಗೂ ಬೆಳವಣಿಗೆಗೆ ಸಮುದಾಯ ಸಹಕರಿಸಬೇಕು. ಸರ್ಕಾರಿ ಪ್ರೌಢಶಾಲೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮದ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಕಲಿಕೆಗೆ ತಜ್ಞರಿಂದ ಮಾಹಿತಿ ಕೊಡಿಸುವುದು, ವಿಜ್ಞಾನ ಕಲಿಕೆಗೆ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ, ಕಂಪ್ಯೂಟರ್ ಲ್ಯಾಬ್ ನಿರ್ಮಾಣ ಸೇರಿದಂತೆ ಪರಿಸರ ಚಟುವಟಿಕೆಗಳು, ಯೋಗ ಶಿಕ್ಷಣ, ಹೆಣ್ಣು ಮಕ್ಕಳಿಗೆ ಕರಾಟೆ ಕಲಿಕಾಭ್ಯಾಸ ಸೇರಿದಂತೆ ಮಕ್ಕಳಲ್ಲಿ ವಿವಿಧ ಕೌಶಲ್ಯಗಳನ್ನು ಹೆಚ್ಚಿಸಿ ಅವರಲ್ಲಿ ಆತ್ಮವಿಶ್ವಾಸ ಹಾಗೂ ಸಂಸ್ಕಾರ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.
ಸರ್ಕಾರಿ ಶಾಲೆ ಉಳಿವಿನಲ್ಲಿ ಗ್ರಾಮಸ್ಥರ ಪಾತ್ರ ಬಹುಮುಖ್ಯ ಸರ್ಕಾರಿ ಶಾಲೆಗಳು ಗ್ರಾಮೀಣ ಭಾರತದ ಶಿಕ್ಷಣದ ಬೆನ್ನೆಲುಬು. ಈ ಶಾಲೆಗಳಲ್ಲಿ ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಆಕರ್ಷಣೀಯವಾಗಿ ಮಾಡಲು ಶಾಲಾ ಶಿಕ್ಷಣ ಇಲಾಖೆ ಹಲವು ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಿದೆ. ಇವುಗಳ ಅನುಷ್ಠಾನಕ್ಕೆ ಶಾಲೆಯ ಹಿರಿಯ ವಿದ್ಯಾರ್ಥಿಗಳು, ಪೋಷಕರು, ದಾನಿಗಳು ಹಾಗೂ ಸಮುದಾಯದ ಸಹಕಾರ ಬೇಕು. ಸರ್ಕಾರಿ ಶಾಲೆಗಳಲ್ಲಿ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಿ ಮಕ್ಕಳ ವ್ಯಕ್ತಿತ್ವವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ವಿವಿಧ ಯೋಜನೆ/ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು. ಪೋಷಕರಾದ ಕೆ.ಜೆ.ಅನಿತಾ ಮತ್ತಿತರರು ಮಾತನಾಡಿದರು. ಶಾಲಾ ಸಿಬ್ಬಂದಿ ಎಂ.ಉಷಾ ಹಾಗೂ ವಿದ್ಯಾರ್ಥಿ- ಪೋಷಕರು ಇದ್ದರು.