ಕುಟ್ಟ ಗ್ರಾಮದಲ್ಲಿ 3.23 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಿಲಯ ವನ್ನು ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ತೀತಿರ ಧರ್ಮಜ ಉತ್ತಪ್ಪ, ಮೀದೇರಿರ ನವೀನ್, ಕಾಳಿಮಾಡ ಪ್ರಶಾಂತ್, ಹೊನ್ನೇಗೌಡ ಮತ್ತಿತರರು ಇದ್ದರು. 28ಎಂಡಿಕೆ06: ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದ ಸುಸಜ್ಜಿತ ವಸತಿ ನಿಲಯ
ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು. ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಕುಟ್ಟದಲ್ಲಿ 3.23 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಿಲಯ ಶನಿವಾರ ಉದ್ಘಾಟನೆ ಮಾಡಿ ಮಾತನಾಡಿದರು.
ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಸಮೀಪದಲ್ಲೇ ಶಾಲೆ, ಆಟದ ಮೈದಾನಗಳೊಂದಿಗೆ ಸುಸಜ್ಜಿತವಾದ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣವಾಗಿದೆ. 2024ರ ಜನವರಿಯಲ್ಲಿ ಈ ವಸತಿ ನಿಲಯ ಸ್ಥಾಪನೆಗೆ ಭೂಮಿ ಪೂಜೆ ಮಾಡಲಾಗಿತ್ತು. 2026ನೇ ಜೂನ್ ತಿಂಗಳಲ್ಲಿ ಅಂದರೆ ಎರಡೂವರೆ ವರ್ಷದ ನಂತರ ವಸತಿ ನಿಲಯ ನಿರ್ಮಾಣವಾಗಿ ಉದ್ಘಾಟನೆ ಮಾಡಲಾಗುತ್ತಿದೆ. ಹೆಚ್ಚು ಬುಡಕಟ್ಟು ಜನಾಂಗ ವಾಸವಿರುವ ಪ್ರದೇಶವಾದ ಕುಟ್ಟ ಮತ್ತು ನಾಗರಹೊಳೆ ಭಾಗದ ವಿದ್ಯಾರ್ಥಿಗಳಿಗೆ ಬಹಳ ಸುಸಜ್ಜಿತವಾಗಿ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಕಟ್ಟಡದ ಕಾಮಗಾರಿಯೂ ಸಹ ತುಂಬಾ ಗುಣಮಟ್ಟದಿಂದ ಕೂಡಿದೆ ಎಂದು ಭಾವಿಸಿದ್ದೇನೆ. ಇದೇ ಶೈಕ್ಷಣಿಕ ವರ್ಷದಿಂದ ವಸತಿಗೃಹ ಆರಂಭವಾಗುತ್ತಿದೆ. 100 ಮಕ್ಕಳಿಗೆ ಇಲ್ಲಿ ವಸತಿಗೆ ಅವಕಾಶವಿದ್ದು 24 ಕೊಠಡಿ ಲಭ್ಯವಿದೆ. ಈಗಾಗಲೇ 52 ಮಕ್ಕಳು ಇದ್ದಾರೆ. ಇಲ್ಲಿನ ವಾತಾವರಣ ಸಹ ಸುಂದರವಾಗಿದ್ದು ಪಕ್ಕದಲ್ಲಿ ಶಾಲೆ ಇದೆ ವಿಶಾಲ ಆಟದ ಮೈದಾನವಿದೆ, ಓದಲಿಕ್ಕೆ ಬಹಳ ಅನುಕೂಲವಾದ ವಾತಾವರಣವಿದ್ದು ಇಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ ಪೊನ್ನಣ್ಣ, ಐಟಿಡಿಪಿ ಜಿಲ್ಲಾಧಿಕಾರಿ ಹೊನ್ನೇಗೌಡ ಮುಂದಿನ ವಾರ ನಿವೃತ್ತಿಯಾಗುತ್ತಿದ್ದು ನಿವೃತ್ತಿಗೆ ಮೊದಲು ವಸತಿ ಗೃಹವನ್ನು ಅವರ ಆಶಯಂತೆ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗಿದೆ, ಜಿಲ್ಲೆಯಲ್ಲಿ ಅವರು ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಶಾಸಕರು ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಶುಭ ಹಾರೈಸಿದರು. ನೆಲ ಮಹಡಿ ಅಲ್ಲದೆ ಮೂರು ಅಂತಸ್ತಿನ ವಸತಿ ನಿಲಯವನ್ನು ಸಂಪೂರ್ಣವಾಗಿ ಶಾಸಕರು ಈ ಸಂದರ್ಭ ವೀಕ್ಷಿಸಿ ಸಂತ್ರಪ್ತಿ ವ್ಯಕ್ತಪಡಿಸಿದರು .
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ತಾ.ಪಂ. ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ, ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಹೆಚ್.ವೈ. ರಾಮಕೃಷ್ಣ, ಪ್ರಮುಖರಾದ ಮುಕ್ಕಾಟಿರ ನವೀನ್, ತೀತಿರ ಮಂದಣ್ಣ, ಜಿ. ಪಂ. ಮಾಜಿ ಸದಸ್ಯ ಬಾನಂಡ ಪ್ರಥ್ವಿ, ಚೊಟ್ಟೆಯಂಡಮಾಡ ವಿಶು, ಅಪ್ಪಚಂಗಡ ಮೋಟಯ್ಯ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಕೊಡಗು ಜಿಲ್ಲೆಯ ಸಮನ್ವಯ ಅಧಿಕಾರಿ ಹೊನ್ನೇಗೌಡ ಸೇರಿದಂತೆ ಪ್ರಮುಖರು ಹಾಜರಿದ್ದರು.