ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆಯಲ್ಲಿ ಅಧಿಕಾರಿಗಳು, ಅಭಿವೃದ್ಧಿ ಸಮಿತಿ ಸದಸ್ಯರಿದ್ದರು. 
ಕೊಡಗು

ಪೊಲೀಸ್ ಇಲಾಖೆಯಿಂದ ಜನಸ್ನೇಹಿ ಸೇವೆ

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್ ಇಲಾಖೆಯಿಂದ ಜನಸ್ನೇಹಿ ಸೇವೆ
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆಯಲ್ಲಿ ಎಸ್‌ಪಿ

ಮಡಿಕೇರಿ: ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಸ್ಪಂದಿಸದಿದ್ದಲ್ಲಿ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಶನಿವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆಯಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಪರಿಶಿಷ್ಟರ ಅಹವಾಲು ಆಲಿಸಿದರು.
ನಂತರ ಮಾತನಾಡಿದ ಅವರು, ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಪರಿಶಿಷ್ಟರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವುದು ಆದ್ಯ ಕೆಲಸವಾಗಿದೆ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ, ಸೇವನೆ ಮತ್ತಿತರ ಸಂಬಂಧ ಕಳೆದ ೮ ತಿಂಗಳಲ್ಲಿ ೨೩೭ ಪ್ರಕರಣಗಳನ್ನು ದಾಖಲಿಸಲಾಗಿದ್ದು, ೩೩೩ ಆರೋಪಿಗಳನ್ನು ಬಂಧಿಸಲಾಗಿದೆ ಎಂದ ಅವರು, ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಸ್ಪಂದಿಸದಿದ್ದಲ್ಲಿ ಮಾಹಿತಿ ನೀಡಬಹುದಾಗಿದೆ ಎಂದರು.
ಮಾದಕ ವ್ಯಸನಕ್ಕೆ ತುತ್ತಾಗದಂತೆ ಹಾಡಿ ಪ್ರದೇಶಗಳು ಸೇರಿದಂತೆ ಇತರೆ ಕಡೆಗಳಲ್ಲಿ ಜಾಗೃತಿ ಮೂಡಿಸಿ, ಸಮಾಜದಲ್ಲಿ ಇತರರಂತೆ ಬದುಕು ಕಟ್ಟಿಕೊಳ್ಳುವಂತಾಗಲು ಪೊಲೀಸ್ ಇಲಾಖೆಯಿಂದ ಹೆಚ್ಚಿನ ಅರಿವು ಮೂಡಿಸುತ್ತಿದೆ. ಪ್ರತೀ ತಿಂಗಳು ಪೊಲೀಸ್ ಠಾಣೆಯಲ್ಲಿ ಪ್ಲಾಂಟರ್ಸ್ ಮಾಲೀಕರ ಜೊತೆ ಸಭೆ ನಡೆಸಲಾಗುತ್ತಿದ್ದು, ರಾಜ್ಯದ ಹೊರ ಭಾಗದಿಂದ ಬರುವ ಕೂಲಿ ಕಾರ್ಮಿಕರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ಸಮಿತಿ ಸದಸ್ಯ ಕೊಡ್ಲಿಪೇಟೆಯ ಜೆ.ಎಲ್.ಜನಾರ್ಧನ ಮಾತನಾಡಿ, ಶನಿವಾರಸಂತೆ, ಕೊಡ್ಲಿಪೇಟೆ ಮತ್ತಿತರ ಕಡೆಗಳಲ್ಲಿ ಪರವಾನಗಿ ಇಲ್ಲದೆ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಈ ಬಗ್ಗೆ ನಿಗಾವಹಿಸಬೇಕು. ಪರಿಶಿಷ್ಟರ ಮೇಲೆ ದೌರ್ಜನ್ಯ ನಿಯಂತ್ರಣ ಸಂಬಂಧ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸಗಳು ಆಗಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ಪರಮೇಶ್ ಮಾತನಾಡಿ, ಕಾಫಿ ತೋಟ ಕೆಲಸಕ್ಕಾಗಿ ಅಸ್ಸಾಂ ಮತ್ತಿತರ ಕಡೆಗಳಿಂದ ಕೂಲಿ ಕಾರ್ಮಿಕರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ಕೂಲಿ ಕಾರ್ಮಿಕರ ಬಗ್ಗೆ ನಿಗಾವಹಿಸಲು ಮಾಲೀಕರ ಜೊತೆ ಸಭೆ ನಡೆಸಿ, ಕಾರ್ಮಿಕರ ಚಲನವಲನಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದು ಕೋರಿದರು.
ಕೊಡಗು ಜಿಲ್ಲೆಯ ಉತ್ತರ ಭಾಗದ ವೀರೇಂದ್ರ ಮಾತನಾಡಿ, ಕೆಲವು ಪೊಲೀಸ್ ಠಾಣೆಗಳಲ್ಲಿ ಸುಳ್ಳು ಪ್ರಕರಣ ದಾಖಲಿಸುತ್ತಿದ್ದು, ಸ್ವಜಾತಿ ಬಂಧುಗಳಿಂದಲೇ ತೊಂದರೆ ಅನುಭವಿಸುವಂತಾಗಿದೆ. ಈ ಸಂಬಂಧ ಪೊಲೀಸ್ ಇಲಾಖೆಯವರು ಪರಿಶೀಲಿಸಿ ಪ್ರಕರಣ ದಾಖಲಿಸಬೇಕು. ಅದನ್ನು ಬಿಟ್ಟು ದೂರು ನೀಡಿದ್ದಾರೆ ಎಂದು ವಿಚಾರಣೆ ಮಾಡದೆ ಸುಳ್ಳು ಪ್ರಕರಣ ದಾಖಲಿಸಬಾರದು ಎಂದು ಮನವಿ ಮಾಡಿದರು.

ಡಿ, ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಭೂಮಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದು, ಪರಿಶಿಷ್ಟರ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆ ಜೊತೆ ಜಂಟಿ ಸರ್ವೆ ನಡೆಸಿ ಅರ್ಹರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಅಭಿವೃದ್ಧಿ ಸಮಿತಿ ಸದಸ್ಯ ಕೆ.ಬಿ.ರಾಜು ಮಾತನಾಡಿ, ಪರಿಶಿಷ್ಟರ ಕುಂದುಕೊರತೆ ಸಂಬಂಧಿಸಿದಂತೆ ಪ್ರತೀ ತಾಲ್ಲೂಕಿನಲ್ಲಿ ಮೂರು ತಿಂಗಳಿಗೊಮ್ಮೆಯಾದರೂ ಸಭೆ ನಡೆಸಬೇಕು. ಇದರಿಂದ ಜಿಲ್ಲಾ ಮಟ್ಟಕ್ಕೆ ಬರುವುದು ತಪ್ಪುತ್ತದೆ ಎಂದರು.
ಸಮಿತಿ ಸದಸ್ಯರಾದ ಪಿ.ಪಿ.ಸುಕುಮಾರ್ ಮಾತನಾಡಿ, ಶಾಲಾ-ಕಾಲೇಜು ಹಂತದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು. ಜನದಟ್ಟಣೆ ಪ್ರದೇಶಗಳಲ್ಲಿ ಪೊಲೀಸರು ಹೆಚ್ಚಿನ ನಿಗಾ ಇಡಬೇಕು ಎಂದರು. ಮತ್ತೊಬ್ಬ ಸಮಿತಿ ಸದಸ್ಯರಾದ ಮುತ್ತಪ್ಪ ಅವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್‌ಪಿ ಮಹೇಶ್ ಕುಮಾರ್, ಲೈನ್‌ಮನೆಗಳು ಸೇರಿದಂತೆ ಹಲವು ಕಡೆಗಳಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ತಳ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುವ ಪ್ರದೇಶದಲ್ಲಿ ಪರಿಶೀಲಿಸಲಾಗುತ್ತದೆ. ಅಸ್ಸಾಂ ಇತರೆ ಕಡೆಗಳಿಂದ ಬಂದಿರುವವರ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಜೊತೆಗೆ ಮಾಲೀಕರ ಜೊತೆಯೂ ಸಹ ಸಮಾಲೋಚನೆ ನಡೆಸಲಾಗುತ್ತದೆ. ಸಂಶಯ ಇದಲ್ಲಿ ಪರಿಶೀಲಿಸಲಾಗುತ್ತದೆ ಎಂದರು.
ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸುಮತಿ ಮಾತನಾಡಿ, ಹಾಡಿ ಜನರಿಗೆ ಆಧಾರ್ ಕಾರ್ಡ್ ಮತ್ತಿತರ ಪ್ರಮಾಣ ಪತ್ರಗಳು ಇನ್ನೂ ಸಹ ಪಡೆದುಕೊಳ್ಳದಿದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಬಹುದಾಗಿದೆ. ಅಕ್ಕಪಡೆಯ ವಾಹನದ ಮೂಲಕ ಪೊಲೀಸರು ಹಾಗೂ ಗೃಹರಕ್ಷಕರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ೧೧೨ (ಪೊಲೀಸ್ ಸಹಾಯವಾಣಿ), ೧೮೧ (ಮಹಿಳಾ ಸಹಾಯವಾಣಿ) ಮತ್ತು ೧೦೯೮(ಮಕ್ಕಳ ಸಹಾಯವಾಣಿ ) ದೂರು ದಾಖಲಿಸಿದ್ದಲ್ಲಿ ಅಕ್ಕಪಡೆ ತಕ್ಷಣವೇ ಭೇಟಿ ನೀಡಿ ಮಾಹಿತಿ ಪಡೆಯಲಿದೆ. ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಲಿದೆ ಎಂದರು.
ಪಿಎಸ್‌ಐ ನವೀನ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪ್ರಕರಣಗಳನ್ನು ದಾಖಲಿಸಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ನಾಗರಿಕ ಹಕ್ಕು ಕಾಯ್ದೆ ಆರಂಭವಾಗಿದ್ದು, ಇದರ ಅವಕಾಶವನ್ನು ಬಳಸಿಕೊಳ್ಳುವಂತಾಗಬೇಕು.
ಸಭೆಯಲ್ಲಿ ಡಿವೈಎಸ್‌ಪಿಗಳಾದ ಚಂದ್ರಶೇಖರ್ ಮತ್ತು ಸೂರಜ್, ಹಿರಿಯ ಪೊಲೀಸ್ ಅಧಿಕಾರಿ ಐ.ಪಿ.ಮೇದಪ್ಪ, ದಲಿತ ಸಂಘರ್ಷ ಸಮಿತಿಯ ಎಚ್.ಎಲ್.ದಿವಾಕರ ಇತರರಿದ್ದರು.