ರೈತ ಸಹಕಾರ ಭವನದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿ.ಸಿ.ಅಮೃತ್, ಸುನಿಲ್ ರಾವ್, ಪಿ.ಬಿ.ಮೋಹನ್ ಇತರರಿದ್ದರು.
- ಗಿಡ ನೆಡುವುದಷ್ಟೇ ಅಲ್ಲ ಪೋಷಣೆಯೂ ಮುಖ್ಯ
ಮಡಿಕೇರಿ: ಗಿಡಗಳನ್ನು ನೆಡುವುದು ಮಾತ್ರವಲ್ಲ, ಅವುಗಳ ಪೋಷಣೆ ಅತ್ಯಗತ್ಯ. ಆಗ ಮಾತ್ರ ಇಂತಹ ಕಾರ್ಯಕ್ರಮಗಳಿಂದ ಸಮಾಜಕ್ಕೆ ಕಾಣಿಕೆ ನೀಡಿದಂತಾಗುತ್ತದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ ಹೇಳಿದರು.
ಸಹಕಾರ ಸಪ್ತಾಹದ ಅಂಗವಾಗಿ ಕುಶಾಲನಗರ ಎಪಿಸಿಎಂಎಸ್‌ನ ರೈತ ಸಹಕಾರ ಭವನದ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ, ಕುಶಾಲನಗರ ಎಪಿಸಿಎಂಎಸ್ ಹಾಗೂ ಸ್ಥಳೀಯ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ಬದುಕಿಗೆ ಉತ್ತಮ ಪರಿಸರ ಮುಖ್ಯ. ಉತ್ತಮ ಗಾಳಿ ಮನುಷ್ಯನ ಆಯಸ್ಸನ್ನು ವೃದ್ಧಿಸುತ್ತದೆ. ಪ್ರಸ್ತುತ ಪ್ರಕೃತಿಯ ಮುನಿಸಿಗೆ ಮನುಷ್ಯರೇ ಕಾರಣ. ಜಲಕ್ಷಾಮ, ಬರ, ಭೂಕುಸಿತ, ಭೂಕಂಪನದಂತಹ ಸನ್ನಿವೇಶಗಳ ಮೂಲಕ ಪ್ರಕೃತಿ ಎಚ್ಚರಿಸುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ವರ್ಷಕ್ಕೊಂದು ಗಿಡ ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆಗೆ ಕಿರುಕಾಣಿಕೆ ನೀಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ವಿ.ಸಿ.ಅಮೃತ್ ಮತ್ತು ಎಸ್.ಆರ್.ಸುನಿಲ್ ರಾವ್ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸೋಮವಾರಪೇಟೆ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮೋಹನ್, ಕುಶಾಲನಗರ ಎಪಿಸಿಎಂಎಸ್ ಉಪಾಧ್ಯಕ್ಷರು ಉಪಸ್ಥಿತರಿದ್ದರು.