ಕೂಡುಮಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಂಕ್ರಾಂತಿ ಸಂಭ್ರಮದಲ್ಲಿ ಅಲಂಕೃತ ಎತ್ತಿನ ಗಾಡಿಯೊಂದಿಗೆ ಧಾನ್ಯಗಳನ್ನು ಪೂಜಿಸಲಾಯಿತು. ಕೆ.ಎಸ್.ರಾಜಾಚಾರಿ, ಟಿ.ಜಿ.ಪ್ರೇಮಕುಮಾರ್, ಗೋಪಾಲಕೃಷ್ಣ ಇತರರಿದ್ದರು.
ಕುಶಾಲನಗರ: ಕುಶಾಲನಗರ ತಾಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮೀಣ ಜನಪದ ಸೊಗಡಿನ ಪ್ರತೀಕವಾದ ರೈತರ ಸುಗ್ಗಿ ಹಬ್ಬವಾದ ಸಂಕ್ರಾಂತಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಗುರುವಾರ ಆಚರಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ಸಂಕ್ರಾಂತಿ ಹಬ್ಬದ ಸಂಸ್ಕೃತಿ ಬಿಂಬಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಅಲಂಕೃತ ಎತ್ತಿನ ಗಾಡಿ ಜತೆಗೆ ಎತ್ತುಗಳೊಂದಿಗೆ ಕೃಷಿ ಸಲಕರಣೆಗಳು ಮತ್ತು ಧಾನ್ಯಗಳ ರಾಶಿ ಹಾಗೂ ಗೋ ಪೂಜೆ ಮಾಡಿ ವಿದ್ಯಾರ್ಥಿಗಳು ಖುಷಿಪಟ್ಟು ಅನ್ನದಾತರ ಅರಿವು ಮೂಡಿಸುವ ಸುಗ್ಗಿ ಸಂಭ್ರಮದಲ್ಲಿ ಭಾಗಿಯಾದರು.
ವಿದ್ಯಾರ್ಥಿಗಳು ರಂಗೋಲಿ ಚಿತ್ತಾರದೊಂದಿಗೆ ಎಳ್ಳು, ಬೆಲ್ಲ, ಕಬ್ಬು, ಹಣ್ಣು ಹಂಚಿಕೆ, ಸಾಂಪ್ರದಾಯಿಕ ಉಡುಪು, ಕುಣಿತದೊಂದಿಗೆ ಸಂಭ್ರಮಿಸಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ರೀತಿ ಓದುವ ವಿದ್ಯಾರ್ಥಿಗಳಲ್ಲಿ ಹಬ್ಬ ಹರಿದಿನ, ಸಂಪ್ರದಾಯ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಶಾಲೆಯ ವಿದ್ಯಾರ್ಥಿ ಸಂಘ, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಘಟಕದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ಮಕ್ಕಳು ಮತ್ತು ಗ್ರಾಮಸ್ಥರ ಮನಸೂರೆಗೊಂಡಿತು.
ಸಂಕ್ರಾಂತಿ ಹಬ್ಬ ಕುರಿತು ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ಬೆಳೆಗಳು ರೈತರ ಕೈ ಸೇರಿದ ಖಷಿಯಲ್ಲಿ ಎಲ್ಲರೂ ಸಾಮೂಹಿಕವಾಗಿ ತಮ್ಮ ತಮ್ಮ ಹೊಲ, ಗದ್ದೆಗಳಲ್ಲಿ ನವ ಧಾನ್ಯಗಳನ್ನು ರಾಶಿ ಹಾಕಿ ಪೂಜೆ ಮಾಡುತ್ತಿದ್ದು, ಇದನ್ನು ಯುವ ಪೀಳಿಗೆಗೆ ಪರಿಚಯಿಸಿ ಮುಂದುವರೆಸಿಕೊಂಡು ಹೋಗುವಂತೆ ಪ್ರೇರೇಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸಂಕ್ರಾಂತಿ ಹಬ್ಬದ ಮಹತ್ವ ಕುರಿತು ಶಿಕ್ಷಕ ಕೆ.ಗೋಪಾಲಕೃಷ್ಣ ಮಾತನಾಡಿದರು. ಗ್ರಾಮದ ಹಿರಿಯ ಕೃಷಿಕ ಕೆ.ಎಸ್.ರಾಜಾಚಾರಿ ನವಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸಿದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್ ಸಂಕ್ರಾಂತಿ ಶುಭಾಶಯಗಳನ್ನು ತಿಳಿಸಿದರು.
ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಬಿ.ಡಿ. ರಮ್ಯಾ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಎನ್ನೆಸ್ಸೆಸ್ ಅಧಿಕಾರಿ ಕೆ.ಟಿ.ಸೌಮ್ಯಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಸ್.ಸುಜಾತಾ, ಕಚೇರಿ ಸಿಬ್ಬಂದಿ ಎಂ.ಉಷಾ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಕ್ರಾಂತಿ ಸಂಭ್ರಮಕ್ಕೆ ಸಾಕ್ಷಿಯಾದರು.
ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ಎಳ್ಳು ಬೆಲ್ಲ ಹಂಚಿ ಕುಣಿದು ಸಂಭ್ರಮಿಸಿದರು. ಮಕ್ಕಳ ಸಂಭ್ರಮಕ್ಕೆ ಶಿಕ್ಷಕರು ಸಾಥ್ ನೀಡಿದರು. ನಂತರ ಕೂಡುಮಗಳೂರು ಗ್ರಾಮದ ಕೃಷಿಕ ದಂಪತಿ ಕೆ.ಆರ್.ನಾಗರಾಜ್ ಮತ್ತು ರಜನಿ ಹಾಗೂ ಅವರ ಮಗಳು ಕೆ.ಎನ್.ಪುಣ್ಯ, ಸಂಕ್ರಾಂತಿಯ ಹಬ್ಬದ ಆಚರಣೆಗಳನ್ನು ನಡೆಸಿಕೊಟ್ಟರು.