ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಂಜೀವಿನಿ ಸಂತೆ ಮೇಳ ಗಮನ ಸೆಳೆಯಿತು.
ಕುಶಾಲನಗರ ತಾಲೂಕು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಂಜೀವಿನಿ ಸಂತೆ ಮೇಳ ಗ್ರಾಮೀಣ ಮಹಿಳೆಯರ ವೃತ್ತಿ ಕೌಶಲ್ಯ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸಚಿನ್ ಉದ್ಘಾಟಿಸಿ, ಮೇಳದ ಯಶಸ್ಸಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್, ಪಂಚಾಯತ್ ಕಾರ್ಯದರ್ಶಿ ಕುಮಾರಸ್ವಾಮಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ತಾರಾÀಕುಮಾರಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಇದ್ದರು.
ವಿವಿಧ ಸ್ವಸಹಾಯ ಗುಂಪುಗಳ ಮಹಿಳೆಯರು ತಮ್ಮ ಸಂಘಗಳ ವತಿಯಿಂದ ತಯಾರಿಸಿದ ವೈವಿಧ್ಯಮಯ ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕಿಟ್ಟಿದ್ದರು. ವಿಶೇಷವಾಗಿ ಮನೆಯಲ್ಲೇ ತಯಾರಿಸಿದ ಶುಚಿಯಾದ ಉಪ್ಪಿನಕಾಯಿಗಳು, ವಿವಿಧ ರೀತಿಯ ಕುರುಕಲು ತಿಂಡಿಗಳು ಮತ್ತು ಸಾಂಪ್ರದಾಯಿಕ ಆಹಾರ ಪದಾರ್ಥಗಳು, ಕೈಮಗ್ಗದ ಬಟ್ಟೆಗಳು ಹಾಗೂ ಕರಕುಶಲ ವಸ್ತುಗಳು, ತಾಜಾ ಹಣ್ಣು ಮತ್ತು ತರಕಾರಿಗಳು ಸಾರ್ವಜನಿಕರ ಗಮನ ಸೆಳೆದವು.
ಈ ಸಂದರ್ಭ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಸಂಜೀವಿನಿ ಸಂತೆ ಮೇಳವು ಮಹಿಳೆಯರ ಸ್ವಾವಲಂಬಿ ಬದುಕಿಗೆ ದೊಡ್ಡ ಉತ್ತೇಜನ ನೀಡುತ್ತಿದೆ. ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಲು ಹಾಗೂ ಆರ್ಥಿಕವಾಗಿ ಸದೃಢರಾಗಲು ಈ ವೇದಿಕೆ ಅತ್ಯಂತ ಸಹಕಾರಿಯಾಗಿದೆ ಎಂದು ಹೇಳಿದರು.
ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಭೇಟಿ ನೀಡಿ, ಮಹಿಳೆಯರು ತಯಾರಿಸಿದ ವಸ್ತುಗಳನ್ನು ಖರೀದಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಿದರು. ಈ ಮೇಳವು ಸ್ಥಳೀಯ ಮಾರುಕಟ್ಟೆಗೆ ಹೊಸ ಕಳೆ ನೀಡಿತ್ತು.