ಚೇರಂಬಾಣೆ ಗೌಡ ಸಮಾಜದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಜಾನಕಿ ಅವರಿಗೆ ಭಾವಪೂರ್ಣ ನಮನ ಸಲ್ಲಿಸಲಾಯಿತು.
ನಾಪೋಕ್ಲು: ಭಾರತದ ಗಾನಕೋಗಿಲೆ ಎಸ್.ಜಾನಕಿ ಅವರ ನಿಧನದ ಹಿನ್ನೆಲೆಯಲ್ಲಿ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಗುರುವಾರ ಗೀತ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಚೇರಂಬಾಣೆ ಗೌಡ ಸಮಾಜದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್ ಮಾತನಾಡಿ, 48 ಸಾವಿರ ಹಾಡುಗಳಿಗೆ ಭಾವನೆಯ ಜೀವ ತುಂಬುವ ಮೂಲಕ 17 ಭಾಷೆಯ ಸಂಗೀತದ ಒಡತಿ ಎಂದೆನಿಸಿಕೊಂಡು ಸಂಗೀತ ಲೋಕವನ್ನು ಶ್ರೀಮಂತ ಗೊಳಿಸಿದ ಜಾನಕಿ ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಎಂದರು.
ಇದೇ ವೇಳೆ ಜಾನಕಿ ಅವರ ಹಾಡುಗಳ ಸಾಲುಗಳಲ್ಲಿ ಕವನ ಹೆಣೆದು ಅಗಲಿದ ಚೇತನಕ್ಕೆ ಭಾವಪೂರ್ಣ ಪುಷ್ಪ ನಮನ ಸಲ್ಲಿಸಲಾಯಿತು. ಮಹಿಳಾ ಒಕ್ಕೂಟದ ಸದಸ್ಯರು, ಯುವ ವೇದಿಕೆಯ ಸದಸ್ಯರು ಒಟ್ಟಾಗಿ ಸೇರಿ ಜಾನಕಮ್ಮನವರ ಆಕಾಶ ದೀಪವು ನೀನೆ.. ಎಂಬ ಗೀತೆ ಹಾಡಿ ಗೀತ ನಮನ ಸಲ್ಲಿಸಿದರು. ಸದಸ್ಯರಾದ ಬೈಮನ ಜ್ಯೋತಿ ತಿಮ್ಮಯ್ಯ, ಕಾಂತಿ ದಯಾನಂದ, ಭವಾನಿ ದಿಲೀಪ್, ಕಡ್ಯದ ಸ್ಮಿತಾ ಜೀವನ್ ಗೀತೆಗಳಿಗೆ ದನಿಯಾದರು. ಕಾರುಗುಂದ ಗೌಡ ಯುವ ವೇದಿಕೆ ಅಧ್ಯಕ್ಷ ಪ್ರದೀಪ್ ಪಾರೆಮಜಲು, ಉಪಾಧ್ಯಕ್ಷ ದಾಯನ ಪುರ್ಶಿನ್, ಕಾರ್ಯದರ್ಶಿ ಕೇಟೋಳಿ ಯಶ್ವಂತ್ ಇತರರಿದ್ದರು.