ಬಲ್ಲಮಾವಟಿ ಗ್ರಾಮದ ನಮೋ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ ಎರಡನೇ ವರ್ಷದ ಹೊನಲು ಬೆಳಕಿನ ಷಟಲ್ ಬ್ಯಾಡ್ಮಿಂಟನ್ ಟೂರ್ನಿ-2026ರಲ್ಲಿ ಮೈಸೂರಿನ ಟೀಮ್ ಆಕಾಶ್ ಫ್ರೆಂಡ್ಸ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 
ಕೊಡಗು

ಗ್ರಾಮೀಣ ಕ್ರೀಡಾಕೂಟಗಳಿಂದ ಗಟ್ಟಿಯಾಗಲಿವೆ ಸಂಬಂಧಗಳು

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಕಾರ್ಯಕರ್ತ ಎಡಿಕೇರಿ ಪ್ರಸನ್ನ ಅಭಿಮತ
  • ಎರಡನೇ ವರ್ಷದ ಹೊನಲು ಬೆಳಕಿನ ಷಟಲ್ ಬ್ಯಾಡ್ಮಿಂಟನ್ ಟೂರ್ನಿ
ನಾಪೋಕ್ಲು: ಗ್ರಾಮೀಣ ಭಾಗದಲ್ಲಿ ಆಯೋಜಿಸುವ ಕ್ರೀಡಾಕೂಟ ಸಾಮರಸ್ಯದ ಜತೆಗೆ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಎಡಿಕೇರಿ ಪ್ರಸನ್ನ ಹೇಳಿದರು.
ಸಮೀಪದ ಬಲ್ಲಮಾವಟಿ ಗ್ರಾಮದ ನಮೋ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ ಎರಡನೇ ವರ್ಷದ ಹೊನಲು ಬೆಳಕಿನ ಷಟಲ್ ಬ್ಯಾಡ್ಮಿಂಟನ್ ಟೂರ್ನಿ-2026ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಪರಿಸರದ ಸಂರಕ್ಷಣೆಗೆ ಯುವ ಪೀಳಿಗೆ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಫಿ ಬೆಳೆಗಾರ ಕರವಂಡ ಲವ ನಾಣಯ್ಯ ಮಾತನಾಡಿ, ಯುವಜನತೆ ವಿಭಿನ್ನವಾಗಿ ಸಮಾಜಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ನಮೋ ಯುವಕ ಸಂಘದ ಅಧ್ಯಕ್ಷ ಬೈರುಡ ವಸಂತ ವಹಿಸಿದ್ದರು. ಉದ್ಯಮಿ ಎಡಿಕೇರಿ ಪ್ರಸನ್ನ ಅವರನ್ನು ನಮೋ ಯುವಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೋಕಿರ ಭಾಭಿ ಭೀಮಯ್ಯ, ಮಾಜಿ ಅಧ್ಯಕ್ಷ ಮಣವಟ್ಟೀರ ಹರೀಶ್ ಕುಶಾಲಪ್ಪ, ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್, ಉಪಾಧ್ಯಕ್ಷ ಕರವಂಡ ನಾಣಯ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಚ್ಚುರ ರವೀಂದ್ರ, ಮಾಜಿ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ, ಹೊಸೊಕ್ಲು ಶ್ರೀಕಾಂತ್, ಗೌರವ ಕಾರ್ಯದರ್ಶಿ ಚೀಯಂಡ ದಿನೇಶ್, ಖಜಾಂಚಿ ರೋಷನ್ ,ಪಾಲ್ಗೊಂಡಿದ್ದರು.
ವೀಕ್ಷಕ ವಿವರಣೆಗಾರರಾಗಿ ವಿನೋದ್ ಮೂಡಗದ್ದೆ ಕಾರ್ಯನಿರ್ವಹಿಸಿದರು. ಕಡ್ಲೇರ ತುಳಸಿ ಮೋಹನ್, ಬೊಳ್ಳುಮಾನಿ ರೋಶನ್, ಹೊಸೊಕ್ಲು ಶ್ರೀಕಾಂತ್ ಇದ್ದರು.
ವಿಜೇತರು: ಮೈಸೂರಿನ ಟೀಮ್ ಆಕಾಶ್ ಫ್ರೆಂಡ್ಸ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಭಾಗಮಂಡಲದ ಆರ್‌ಸಿಬಿ ಬಾಯ್ಸ ತಂಡ ದ್ವಿತೀಯ ಸ್ಥಾನ ಗಳಿಸಿತು. ಪುರುಷರ ವಿಭಾಗದ ಟೂರ್ನಿ ವಿಜೇತರಿಗೆ ಪ್ರಥಮ ಬಹುಮಾನ 5555 ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 4444 ರೂ.ನಗದು ಹಾಗೂ ಟ್ರೋಫಿ ವಿತರಿಸಲಾಯಿತು.
ಮಹಿಳೆಯರ ವಿಭಾಗದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಾಪೋಕ್ಲುವಿನ ನಿತ್ಯ ನೀಲಮ್ಮ ತಂಡ ಪ್ರಥಮ ಸ್ಥಾನ ಗಳಿಸಿದರೆ ನಾಪೋಕ್ಲುವಿನ ಪ್ರಜ್ಞಾ ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳಾ ವಿಭಾಗದ ಟೂರ್ನಿ ವಿಜೇತರಿಗೆ ಪ್ರಥಮ ಬಹುಮಾನ 3333 ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 2222ರೂ.ನಗದು ಹಾಗೂ ಟ್ರೋಫಿ ವಿತರಿಸಲಾಯಿತು.