ಪಾಲಿಬೆಟ್ಟ ಯಂಗ್ ಇಂಡಿಯಾ ಯೂತ್ ಕ್ಲಬ್ ಆಯೋಜಿಸಿದ್ದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿದರು. ಸಲೀಂ, ಹನೀಫ್, ರಫೀಕ್ ಇತರರಿದ್ದರು.
ಸಿದ್ದಾಪುರ: ಪಾಲಿಬೆಟ್ಟ ಯಂಗ್ ಇಂಡಿಯಾ ಯೂತ್ ಕ್ಲಬ್ ಆಯೋಜಿಸಿದ್ದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯ ಭಾನುವಾರ ನಡೆಯಿತು. ಫೈನಲ್ ಪಂದ್ಯಕ್ಕೆ ಮುಖ್ಯ ಅತಿಥಿಯಾಗಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭಾಗವಹಿಸಿ ಪಂದ್ಯಾವಳಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿರುವುದಕ್ಕೆ ಆಯೋಜಕರನ್ನು ಅಭಿನಂದಿಸಿದರು. ಇತ್ತೀಚಿನ ದಿನಗಳಲ್ಲಿ ಫುಟ್ಬಾಲ್‌ಗೆ ವ್ಯಾಪಕ ಮನ್ನಣೆ ದೊರಕುತ್ತಿದ್ದು, ಗ್ರಾಮೀಣ ಯುವಕರು ಈ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ತಮ್ಮ ಕಾಲ್ಬಲ ಹಾಗೂ ಪ್ರತಿಭೆಯ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಲು ಇಂತಹ ಪಂದ್ಯಾವಳಿಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು. ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ನಿರಂತರ ಪ್ರೋತ್ಸಾಹ ಮತ್ತು ಅವಕಾಶ ನೀಡುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಯಂಗ್ ಇಂಡಿಯಾ ಯೂತ್ ಕ್ಲಬ್ ಅಭಿವೃದ್ಧಿಗೆ ತಮ್ಮ ಶಾಸಕರ ಅನುದಾನದಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಯಂಗ್ ಇಂಡಿಯಾ ಯೂತ್ ಕ್ಲಬ್ ಅಧ್ಯಕ್ಷ ಸಲೀಂ, ಪದಾಧಿಕಾರಿಗಳು ಹಾಗೂ ಸದಸ್ಯರು, ಪಾಲಿಬೆಟ್ಟ ವಲಯ ಅಧ್ಯಕ್ಷ ಕಾಳಪ್ಪ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷ ರಫೀಕ್, ಗೋಣಿಕೊಪ್ಪ ಪಂಚಾಯತ್ ಅಧ್ಯಕ್ಷ ಪ್ರಮೋದ್ ಗಣಪತಿ, ಸೇರಿದಂತೆ ಅನೇಕ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.