ಶಾಸಕ ಡಾ. ಮಂತರ್ ಗೌಡ ನೇತೃತ್ವದಲ್ಲಿ ಮಡಿಕೇರಿ ದಸರಾ ಸಮಿತಿ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿತ್ತು. ಮಹೇಶ್ ಜೈನಿ, ಬಿ.ಕೆ. ಅರುಣ್ ಕುಮಾರ್, ಅರುಣ್ ಶೆಟ್ಟಿ, ಸಬೀತಾ, ಮುದ್ದುರಾಜ್ ಮತ್ತಿತರರು ಇದ್ದರು.
ಐತಿಹಾಸಿಕ ಮಡಿಕೇರಿ ದಸರಾ ಆಚರಣೆಗೆ ಈ ವರ್ಷ ಸರ್ಕಾರ 2 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನೇತೃತ್ವದಲ್ಲಿ ನಗರ ದಸರಾ ಸಮಿತಿ ನಿಯೋಗ ಶುಕ್ರವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಡಿಕೇರಿ ದಸರಾ ಕ್ಕೆ ಅನುದಾನ ಕೋರಿಕೆ ಸಲ್ಲಿಸಿದ ಸಂದರ್ಭ ತಕ್ಷಣವೇ ಸ್ಪಂದಿಸಿದ ಅವರು 2 ಕೋಟಿ ರೂ. ಅನುದಾನ ಘೋಷಣೆ ಮಾಡಿದರು.
ನಿಯೋಗದಲ್ಲಿ ಮಡಿಕೇರಿ ದಸರಾ ಸಮಿತಿಯ ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಕಾರ್ಯಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯ ದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬೀತಾ, ಕಾರ್ಯದರ್ಶಿ ಮುದ್ದುರಾಜ್, ದಸರಾ ವೇದಿಕೆ ಸಮಿತಿ ಅಧ್ಯಕ್ಷ ಆರ್.ಪಿ. ಚಂದ್ರಶೇಖರ್, ಅಲಂಕಾರ ಸಮಿತಿ ಅಧ್ಯಕ್ಷ ಮುನಿರ್ ಮಾಚಾರ್, ಯುವ ದಸರಾ ಸಮಿತಿ ಅಧ್ಯಕ್ಷ ಕವನ ಕೊತ್ತೋಳಿ, ದಶ ಮಂಟಪ ಸಮಿತಿ ಅಧ್ಯಕ್ಷ ಪೂಣಚ್ಚ, ಪ್ರಧಾನ ಕಾರ್ಯದರ್ಶಿ ವಿನೋದ್, ಪ್ರಕಾಶ್ ಆಚಾರ್ಯ, ಕಾರ್ಯದರ್ಶಿ ಮೋಹನ್, ಗಜೇಂದ್ರ, ಜಗದೀಶ್ ಹಾಗು ದಸರಾ ಸಮಿತಿ ಪದಾಧಿಕಾರಿಗಳು ಇದ್ದರು.
2024 ಮತ್ತು 2025ರಲ್ಲಿ ಮಡಿಕೇರಿ ದಸರಾಕ್ಕೆ ಸರ್ಕಾರ ತಲಾ 1.50 ಕೋಟಿ ರೂ. ಅನುದಾನ ಕೊಟ್ಟಿತ್ತು.