ಸೋಮವಾರಪೇಟೆ ತಾಲೂಕು ಕಚೇರಿ ಎದುರು ಬಿಜೆಪಿ ಯುವಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತು. ಅಪ್ಪಚ್ಚು ರಂಜನ್, ಮಹೇಶ್, ಗೌತಮ್, ಕವಿತಾ ಇದ್ದರು. 
ಕೊಡಗು

ಮಾಸಾಶನ ತಡೆಗೆ ಬಿಜೆಪಿ ಯುವ ಮೋರ್ಚಾ ಕಿಡಿ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರದ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ
ಸೋಮವಾರಪೇಟೆ: ಅರ್ಹ ಫಲಾನುಭವಿಗಳ ವೃದ್ಧಾಪ್ಯ, ವಿಧವಾ ವೇತನ, ಅಂಗವಿಕಲರ ಮಾಸಾಶನವನ್ನು ತಡೆಹಿಡಿಯುವ ಮೂಲಕ ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ಬಡ ಜನರ ಮೇಲೆ ಹೇರುತ್ತಿರುವ ಅಮಾನವೀಯ ನಿಯಮಗಳ ವಿರುದ್ಧ ಕೇಂದ್ರ ಸರ್ಕಾರವೂ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯದಿಂದ ವರದಿ ಕೇಳಿದೆ. ಆದರೆ, ಆಹಾರ ಇಲಾಖೆಯ ತಳಮಟ್ಟದ ಅಧಿಕಾರಿಗಳು ಹಾಗೂ ನ್ಯಾಯಬೆಲೆ ಅಂಗಡಿಯವರು ಜಾತಿ ಪ್ರಮಾಣ ಪತ್ರ ಒದಗಿಸುವಂತೆ ಹೇಳುವ ಮೂಲಕ ಬಡವರಿಗೆ ಪಡಿತರ ನೀಡಲು ನಿರಾಕರಿಸಲಾಗುತ್ತಿದೆ.
ಬಡವರು, ವೃದ್ಧರು ಕಂದಾಯ ಇಲಾಖೆ ಮುಂದೆ ಗೋಗರೆಯುತ್ತಿದ್ದಾರೆ. ವೃದ್ಧರು ಸೂಕ್ತ ದಾಖಲಾತಿಗಾಗಿ ಪರದಾಡುತ್ತಿದ್ದಾರೆ. ಕೂಡಲೇ ರಾಜ್ಯಪಾಲರು ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿ, ಬಡವರನ್ನು ರಕ್ಷಿಸಬೇಕು ಎಂದು ತಹಸೀಲ್ದಾರ್ ಕೃಷ್ಣಮೂರ್ತಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಮಸಾಶನ ಪ್ರತಿತಿಂಗಳು ಫಲಾನುಭವಿಗಳಿಗೆ ತಲುಪಲೇಬೇಕು. ರಾಜ್ಯ ಸರ್ಕಾರದ ಅವೈಜ್ಞಾನಿಕ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನವನ್ನು ನಂಬಿಕೊಂಡಿರುವ ಹೆಚ್ಚಿನ ವೃದ್ಧರಿಗೆ ಕಳೆದ ಹಲವು ತಿಂಗಳಿನಿಂದ ಮಾಸಾಶನ ಬರುತ್ತಿಲ್ಲ. ಮಾಸಶನವನ್ನೇ ನಂಬಿ ವೃದ್ಧರು ಉಪವಾಸ ಮಾಡುವಂತಾಗಿದೆ. ಮಾತ್ರೆ, ಔಷಧಕ್ಕೆ ಹಣವಿಲ್ಲದೆ ರೋಗಗಳು ಉಲ್ಬಣವಾಗುತ್ತಿರುವ ಬಗ್ಗೆ ಅನೇಕರು ಸಂಕಷ್ಟ ಹೇಳಿಕೊಂಡಿದ್ದಾರೆ. ಆಹಾರ ಪ್ರತಿಯೊಬ್ಬ ನಾಗರಿಕನ ಮೂಲ ಹಕ್ಕಾಗಿದೆ. ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣ ನೀಡಿ ಬಡವರಿಗೆ ರೇಷನ್ ನಿರಾಕರಿಸುವುದು ಸಂವಿಧಾನ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ತಾಲೂಕು ಅಧ್ಯಕ್ಷ ಮೋಹಿತ್, ಮಂಡಲ ಅಧ್ಯಕ್ಷ ಗೌತಮ್ ಗೌಡ, ಮುಖಂಡರುಗಳಾದ ಚಂದ್ರಶೇಖರ್ ಹೆರೂರು, ದರ್ಶನ್ ಜೋಯಪ್ಪ, ಎಸ್.ಆರ್.ಸೋಮೇಶ್, ಕವಿತಾ ವಿರೂಪಾಕ್ಷ, ತಂಗಮ್ಮ, ರೂಪ ಸತೀಶ್, ಮಂಜುಳಾ ಸುಬ್ರಮಣಿ, ಸವಿತಾ ಸತೀಶ್, ಎಸ್.ಆರ್.ಸೋಮೇಶ್, ಶ್ರೀನಿಧಿ, ಶರತ್, ಪ್ರವೀಣ್, ಮನುಕುಮಾರ್ ರೈ ಇದ್ದರು.