ಮಾದಾಪುರ ಶ್ರೀಮತಿ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಅಂತರರಾಷ್ಟ್ರೀಯ ಖ್ಯಾತಿಯ ಟೆನ್ನಿಸ್ ಆಟಗಾರ ಮಚ್ಚಂಡ ರೋಹನ್ ಬೋಪಣ್ಣ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕರ್ನಲ್ ಬಿ. ಜಿ. ವಿ. ಕುಮಾರ್, ಸುಪ್ರಿಯಾ ಬೋಪಣ್ಣ, ಮಂಜುನಾಥ್, ಮಂದಪ್ಪ, ರೀಟಾ ಇದ್ದರು. 
ಕೊಡಗು

ವಿದ್ಯಾರ್ಥಿಗಳೊಂದಿಗೆ ರೋಹನ್ ಬೋಪಣ್ಣ ಸಂವಾದ

ಸುನಿಲ್ ಪೊನ್ನೇಟಿ
ಮಡಿಕೇರಿ:
ಮಾದಾಪುರದಲ್ಲಿರುವ ಶ್ರೀಮತಿ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಅಂತರರಾಷ್ಟ್ರೀಯ ಖ್ಯಾತಿಯ ಟೆನ್ನಿಸ್ ಆಟಗಾರ ಮಚ್ಚಂಡ ರೋಹನ್ ಬೋಪಣ್ಣ ಇತ್ತೀಚೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
2024ರ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಚಾಂಪಿಯನ್, ಪದ್ಮಶ್ರೀ, ಅರ್ಜುನ, ಏಕಲವ್ಯ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೋಹನ್ ಬೋಪಣ್ಣ ಅವರು ವಿದ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರದ ಮಹತ್ವ ತಿಳಿಸಿಕೊಟ್ಟರು. ಜತೆಗೆ ಉನ್ನತ ಮಟ್ಟದ ಕ್ರೀಡಾಪಟುವಾಗಲು ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳು ಮತ್ತು ಶ್ರಮದ ಕುರಿತು ಉಪಯುಕ್ತ ಸಲಹೆಗಳನ್ನು ನೀಡಿದರು.
ಸಂವಾದದ ವೇಳೆ ಮಾತನಾಡಿದ ಅವರು, ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರವಿರಲಿ, ದೃಢಸಂಕಲ್ಪ ಮತ್ತು ನಿರಂತರ ಪ್ರಯತ್ನದಿಂದ ಮುಂದುವರಿದರೆ ಜೀವನದಲ್ಲಿ ಯಶಸ್ಸು ಖಂಡಿತ ಸಾಧ್ಯ. ಪ್ರತಿಯೊಬ್ಬರ ಜೀವನದಲ್ಲೂ ಅಡೆತಡೆಗಳು ಬರುವುದು ಸಹಜ, ಆದರೆ ಅವೆಲ್ಲವನ್ನೂ ಮೀರಿ ಧೈರ್ಯದಿಂದ ಮುನ್ನಡೆಯಬೇಕು ಎಂದು ಹೇಳಿದರು.
ಶ್ರೀಮತಿ ಡಿ. ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕರ್ನಲ್ ಬಿ. ಜಿ. ವಿ. ಕುಮಾರ್ ಮಾತನಾಡಿ, ತ್ರಿದ ಫೌಂಡೇಶನ್ ಮೂಲಕ ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವ ರೋಹನ್ ಬೋಪಣ್ಣ ಅವರ ಸಾಮಾಜಿಕ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ರೋಹನ್ ಬೋಪಣ್ಣ ಅವರ ಪತ್ನಿ ಸುಪ್ರಿಯಾ ಬೋಪಣ್ಣ, ಆಡಳಿತ ಮಂಡಳಿಯ ಸದಸ್ಯ ಮಂಜುನಾಥ್, ಪ್ರಾಂಶುಪಾಲ ಮಂದಪ್ಪ, ಮುಖ್ಯ ಶಿಕ್ಷಕಿ ರೀಟಾ, ಉಪನ್ಯಾಸಕರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.