ಗೋಣಿಕೊಪ್ಪಲಿನ ಓಜಸ್ವಿ ಫೌಂಡೇಶನ್ ವತಿಯಿಂದ ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರೋಬೋಟಿಕ್ಸ್ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಪ್ರಾಯೋಗಿಕ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಿದರು.
ಗೋಣಿಕೊಪ್ಪಲಿನ ಓಜಸ್ವಿ ಫೌಂಡೇಶನ್ ವತಿಯಿಂದ ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಪಿಯುಸಿ ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ನಡೆಸಲಾಯಿತು. ಬೆಂಗಳೂರು ಕೊಡಗು ಗೌಡ ಸಮಾಜದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಚೌರಿರ ಜಗತ್ ತಿಮ್ಮಯ್ಯ ಉದ್ಘಾಟಿಸಿದರು. ನಣತರ ಮಾತನಾಡಿದ ಅವರು ದಾನಿಗಳ ಸಹಕಾರ ಮತ್ತು ಓಜಸ್ವಿ ಫೌಂಡೇಶನ್‌ನ ಶಿಕ್ಷಣಾಭಿವೃದ್ಧಿ ಉಪಕ್ರಮವನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಶ್ರದ್ಧೆಯಿಂದ ಉಪಯೋಗಿಸಿಕೊಂಡು ತಮ್ಮ ತಾಂತ್ರಿಕ ಕೌಶಲ್ಯವನ್ನು ವಿಸ್ತರಿಸಿಕೊಳ್ಳುವಂತೆ ಸಲಹೆ ನೀಡಿದರು.
ಓಜಸ್ವಿ ಫೌಂಡೇಶನ್ ಟ್ರಸ್ಟಿ ಡಾ. ಪಿ.ಸಿ. ಕವಿತಾ ಕಾರ್ಯಕ್ರಮದ ಉದ್ದೇಶ ಮತ್ತು ಸಂಸ್ಥೆಯ ಶಿಕ್ಷಣ ಕ್ಷೇತ್ರದ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಓಜಸ್ವಿ ಫೌಂಡೇಶನ್ ಟ್ರಸ್ಟಿಗಳೂ ಆದ ಬೆಂಗಳೂರು ಜಸ್ಟ್ ರೋಬೋಟಿಕ್ಸ್ ಸಂಸ್ಥೆಯ ಸಿಇಒ ಸಿ.ಎ. ಬ್ರಿಜೇಶ್, ಯು.ಜಿ. ವಿಜಿತಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ಕ್ಷೇತ್ರದ ಹೊಸ ತಂತ್ರಜ್ಞಾನಗಳ ಕುರಿತು ಕುತೂಹಲಕಾರಿಯಾಗಿ ತಿಳಿಸಿ, ಅವರೊಂದಿಗೆ ಸಂವಾದ ನಡೆಸಿದರು.
Àನಂತರ ಪ್ರಾಯೋಗಿಕ ಅಧಿವೇಶನದಲ್ಲಿ ವಿದ್ಯಾರ್ಥಿಗಳು ಗುಂಪು ಚಟುವಟಿಕೆಗಳ ಮೂಲಕ ರೋಬೋಟ್ ಮಾದರಿಗಳನ್ನು ನಿರ್ಮಿಸಿ, ಅವುಗಳ ಕಾರ್ಯವಿಧಾನ ಕಲಿತರು. ಸಂಪನ್ಮೂಲ ವ್ಯಕ್ತಿಗಳು ಪ್ರತಿಯೊಂದು ಹಂತದಲ್ಲಿ ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ತಾಂತ್ರಿಕ ಕುತೂಹಲವನ್ನು ಉತ್ತೇಜಿಸಿದರು.
ಓಜಸ್ವಿ ಫೌಂಡೇಶನ್‌ನ ಇಂಪಾನಾ ವಿದ್ಯಾರ್ಥಿಗಳಿಗೆ ರೋಬೋಟ್ ಮಾದರಿ ನಿರ್ಮಾಣದಲ್ಲಿ ಸಹಕಾರ ನೀಡಿದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಸಕ್ರಿಯವಾಗಿ ಭಾಗವಹಿಸಿ ತಮ್ಮ ಸೃಜನಾತ್ಮಕತೆಯನ್ನು ಪ್ರದರ್ಶಿಸಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಪ್ರಾಂಶುಪಾಲರಾದ ಪಿ.ಎಂ, ದೇವಕಿ, ಉಪನ್ಯಾಸಕರು ಇದ್ದರು.