road not in good condition
ಸುನಿಲ್ ಕುಮಾರ್ ಬೋರ್ಕಾರ್ ವಿರಾಜಪೇಟೆ
ವಿರಾಜಪೇಟೆಯ ಪೆರಂಬಾಡಿಯಿಂದ ಮಾಕುಟ್ಟಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಬಹುತೇಕ ಜಲ್ಲಿಕಲ್ಲುಗಳು ಮೇಲೆದಿದ್ದು, ಹಳ್ಳಗಳೇ ಅತಿಯಾಗಿವೆ. ಇದರಿಂದ ಸಂಚಾರಕ್ಕೆ ತೊಡಕಾಗಿದೆ.
ಈ ಮಾರ್ಗದಲ್ಲಿ ಇತ್ತೀಚೆಗೆ ಮರು ಡಾಂಬರೀಕರಣ ಮಾಡಲಾಗಿದೆಯಾದರೂ ಅದು ನೆಪ ಮಾತ್ರಕ್ಕೆ ಎಂಬಂತಾಗಿದೆ. ಮಳೆಗಾಲ ಆರಂಭದ ಮೊದಲೇ ರಸ್ತೆ ಮತ್ತೆ ಹಳೆಯ ಸ್ಥಿತಿಯನ್ನೇ ತಲುಪಿರುವುದು ಶೋಚನೀಯವಾಗಿದೆ. ವಿರಾಜಪೇಟೆ ತಾಲೂಕಿನ ಈ ಮಾರ್ಗ ಕರ್ನಾಟಕ- ಕೇರಳ ರಾಜ್ಯಗಳ ನಡುವಿನ ರಸ್ತೆ ಸಂಪರ್ಕವಿದೆ. ಎರಡೂ ರಾಜ್ಯಗಳಿಂದ ಬಂದು ಹೋಗುವ ಪ್ರವಾಸಿಗರ ಸಂಖ್ಯೆಯೂ ಈ ಮಾರ್ಗದಲ್ಲಿ ದಿನಕ್ಕೆ ಹೆಚ್ಚುತ್ತಿದೆ. ಕೇರಳದ ವಿವಿಧ ದೇವಾಲಯಗಳಿಗೂ, ಕೊಡಗಿನ ಪ್ರಮುಖ ವಿಹಾರ ತಾಣಗಳಿಗೂ ಪ್ರವಾಸೋದ್ಯಮದ ಮೂಲಕ ಆದಾಯ ತಂದುಕೊಡುವಲ್ಲಿ ಈ ಮಾರ್ಗದ ಕೊಡುಗೆ ದೊಡ್ಡದಾಗಿಯೇ ಇದೆ ಎಂಬುದು ತಿಳಿದೇ ಇದೆ.
ರಾಜ್ಯ ಹೆದ್ದಾರಿ ಪೆರುಂಬಾಡಿ ಪೊಲೀಸ್ ಚೆಕ್‌ಪೋಸ್ಟ್‌ನಿಂದ 3 ಕಿಲೋಮೀಟರ್ ದೂರದ ರಸ್ತೆಯ ಸ್ಥಿತಿ ದಿನದಿಂದ ದಿನಕ್ಕೆ ಹಾಳಾಗುತ್ತಿರುವುದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ. ಹದಗೆಟ್ಟಿದ್ದ ಹಳೆಯ ರಸ್ತೆಯನ್ನು ಉನ್ನತೀಕರಣ ಮಾಡುವ ಬಗ್ಗೆ ಕೆಲವು ತಿಂಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕೇರಳ ರಸ್ತೆ ಸಂಪರ್ಕ ಸುಗಮವಾಗಲಿದೆ ಎಂದು ಪ್ರವಾಸಿಗರು ಮತ್ತು ವಾಣಿಜ್ಯ ಉದ್ದಿಮೆದಾರರು ನಿರೀಕ್ಷೆ ಮಾಡಿದ್ದರು. ಕಾಮಗಾರಿಯೇನೋ ಆರಂಭವಾಯಿತು. ಆದರೆ, ನೂತನ ರಸ್ತೆ ಮಾತ್ರ ಹೊಸತನ ಉಳಿಸಿಕೊಳ್ಳಲಿಲ್ಲ.
ರಸ್ತೆಗೆ ಹಾಕಿದ್ದ ಡಾಂಬರು ಕಾಮಗಾರಿ ನಡೆದ ಕೆಲವೇ ದಿನಗಳಲ್ಲಿ ಕಿತ್ತು ಬಂದಿದೆ. ಹೆದ್ದಾರಿಯ ಹಲವು ಕಡೆ ಹಳ್ಳ, ತಗ್ಗುಗಳು ಆಗಿವೆ. ಕಾರಣ ಕೇಳಿದರೆ ಅಧಿಕಾರಿಗಳು 2ನೇ ಹಂತದ ಕಾಮಗಾರಿ ನಡೆಸಲು ಡಾಂಬರು ಲಭ್ಯವಾಗಿಲ್ಲ ಎನ್ನುತ್ತಾರೆ. 2 ದಿನಗಳಿಂದ ಜಿಲ್ಲೆಯಲ್ಲಿ ಮಳೆ ಆರಂಭವಾಗಿದ್ದು, ದಿನದಿಂದ ದಿನಕ್ಕೆ ರಸ್ತೆಯಲ್ಲಿ ಗಿಂಡಿ, ಹಳ್ಳದ ಪ್ರಮಾಣ ವಿಸ್ತಾರವಾಗುತ್ತಿದೆ. ಅಧಿಕ ಭಾರದ ಸರಕು,ಸಾಗಣೆ ವಾಹನ ಸವಾರರಂತೂ ಸರ್ಕಸ್ ಮಾಡಿಕೊಂಡೇ ಒಬ್ಬರ ಹಿಂದೆ ಒಬ್ಬರು ವಾಹನ ಚಾಲನೆ ಮಾಡಿಕೊಂಡು ಸಾಗಬೇಕಾದ ಪರಿ ಸ್ಥಿತಿ ಎದುರಾಗಿದೆ.