ಶನಿವಾರಸಂತೆ ನಿವೃತ್ತ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಯೋಜಿಸಲಾಗಿತ್ತು. ನಿವೃತ್ತ ಸೈನಿಕ ಅಧಿಕಾರಿಗಳಾದ ಕಾರ್ಯಪ್ಪ, ಕಾವೇರಪ್ಪ, ಚಂಗಪ್ಪ, ಮಹೇಶ್ ಇತರರು ಇದ್ದರು.
- ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ.ಎ.ಕಾರ್ಯಪ್ಪ ಬೇಸರ
ಶನಿವಾರಸಂತೆ: ದೇಶ ರಕ್ಷಣೆಗಾಗಿ ಪ್ರಾಣವನ್ನೂ ಲೆಕ್ಕಿಸದೆ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸೈನಿಕರನ್ನು ಸರ್ಕಾರಿ ಕಚೇರಿಗಳಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ, ನಿವೃತ್ತ ಸೈನಿಕ ಕೆಲಸ ಮಾಡಿಕೊಡಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮತ್ತು ನಿವೃತ್ತ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ ಬೇಸರ ವ್ಯಕ್ತಪಡಿಸಿದರು.
ಶನಿವಾರಸಂತೆ ನಿವೃತ್ತ ಸೈನಿಕ ಸಂಘದಿಂದ ಗೋಪಾಲಪುರದ ಲತಾ ಮಹೇಶ್ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಮತ್ತು ಸಂತೋಷ ಕೂಟ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಗಿಲ್ ಯುದ್ಧದಲ್ಲಿ ಕುತಂತ್ರಿ ಪಾಕ್ ಸೈನಿಕರ ವಿರುದ್ಧ ಹೋರಾಡಿ ಹಲವಾರು ನಮ್ಮ ಸೈನಿಯರು ವೀರ ಮರಣ ಹೊಂದಿದರು. 1999 ಜುಲೈ 26 ರಂದು ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯ ಸಾಧಿಸಿದ ನೆನಪಿಗಾಗಿ ಕಾರ್ಗಿಲ್ ವಿಜಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ನಿವೃತ್ತ ಸೈನಿಕರು ಕೆಲಸ ನಿಮಿತ್ತ ಸರ್ಕಾರಿ ಕಚೇರಿಗೆ ಹೋದಾಗ ಯಾವುದೇ ಕೆಲಸ ಆಗುತ್ತಿಲ್ಲ. ನಿವೃತ್ತ ಸೈನಿಕರಿಂದಲೂ ಅಧಿಕಾರಿಗಳು ಲಂಚ ಕೇಳುತ್ತಾರೆ. ಸೈನಿಕರ ಸಂಘಕ್ಕೆ 20 ಸೆಂಟು ಜಾಗ ನೀಡಿ ಎಂದು ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದರು.
ಸಮಾರಂಭದಲ್ಲಿ ನಿವೃತ್ತ ಕರ್ನಲ್ ಕಾವೇರಪ್ಪ, ನಿವೃತ್ತ ಮೇಜರ್ ಚಂಗಪ್ಪ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಸುರೇನ್ ಸುಬ್ಬಯ್ಯ, ವಾಸಪ್ಪನ್, ಎ.ಎಸ್.ಮಹೇಶ್, ಮಡಿಕೇರಿ ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ಆರ್.ಶೆಟ್ಟಿ , ನಿವೃತ್ತ ಸೈನಿಕ ಅಧಿಕಾರಿ ಈರಪ್ಪ, ಎಚ್.ಪಿ.ಮಹೇಶ್, ಪಿ.ಎನ್.ಗಂಗಾಧರ್, ಎಸ್.ಎನ್.ಪಾಂಡು, ಎಚ್.ಎಂ.ವೆಂಕಟೇಶ್, ಸಿ.ಪಿ.ಬಸಪ್ಪ ಇತರರು ಇದ್ದರು.