ಗಣತಿ ಕಾರ್ಯದಿಂದ ಪ್ರೌಢಶಾಲಾ ಶಿಕ್ಷಕರಿಗೆ ವಿನಾಯಿತಿ ಕೋರಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕೊಡಗು ಜಿಲ್ಲಾ ಘಟಕದಿಂದ ಕೊಡಗು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಹೆಚ್.ಜಿ. ಕುಮಾರ್, ಎಂ. ಎಸ್. ಮಹೇಂದ್ರ, ಪಿ.ಎಸ್. ರವಿಕೃಷ್ಣ, ಕೆ.ಆರ್. ರತ್ನಕುಮಾರ್ ಇದ್ದರು.
ಪ್ರೌಢಶಾಲಾ ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ ಕೋರಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕೊಡಗು ಜಿಲ್ಲಾ ಘಟಕದಿಂದ ಕೊಡಗು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. 2026-27ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ನಡೆಸಲಿರುವ ಜನಗಣತಿಯಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ವಿನಾಯಿತಿ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಸ್. ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದ ಕೊಡಗು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪದಾಧಿಕಾರಿಗಳು, ಹತ್ತನೇ ತರಗತಿಯ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಬಹಳ ಒತ್ತಡವಿದ್ದು ಪರೀಕ್ಷಾ ಕಾರ್ಯ ಮತ್ತು ಮೌಲ್ಯ ಮಾಪನ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ, ಪ್ರೌಢಶಾಲಾ ಶಿಕ್ಷಕರಿಗೆ ವಿನಾಯಿತಿ ನೀಡಬೇಕು, ಅನಿವಾರ್ಯವಿದ್ದರೆ, ಮೇಲ್ವಿಚಾರಕರು ಮತ್ತು ನೋಡಲ್ ಅಧಿಕಾರಿಗಳಾಗಿ ನೇಮಿಸಬೇಕು. ಆನಾರೋಗ್ಯವಿದ್ದವರಿಗೆ, ನಿವೃತ್ತಿ ಅಂಚಿನಲ್ಲಿ ಇರುವವರನ್ನು ಜನಗಣತಿಯಿಂದ ಕೈಬಿಡಬೇಕು. ಬೇರೆ ಇಲಾಖೆಯವರನ್ನು ಗಣತಿ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ಕೋರಲಾಯಿತು.
ಇದೇ ಸಂದರ್ಭದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ, ಪರಿಶಿಷ್ಟ ಜಾತಿ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಗಳಿಕೆ ರಜೆ ಮಂಜೂರು ಮಾಡಬೇಕೆಂದು ಮನವಿ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಕೇಡರ್‌ಗೆ ತಕ್ಕಂತೆ ಮೇಲ್ವಿಚಾರಕರು ಮತ್ತು ನೋಡಲ್ ಆಗಿ ನೇಮಿಸುವ ಭರವಸೆ ನೀಡಿದರು. ಕೊಡಗು ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರ ಕಾರ್ಯಕ್ಷಮತೆ ಬಗ್ಗೆ ಪ್ರಶಂಸಿದರು. ಎರಡು ಗಣತಿದಾರರಿಗೂ, ಗಳಿಕೆ ನೀಡಲು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಹೇಳಿದರು ಎಂದು ಶಾಲಾ ಸಹಶಿಕ್ಷಕರ ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದರು.
ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ್ ಅವರನ್ನು ಈ ತಂಡ ಭೇಟಿ ಮಾಡಿ, ಪ್ರೌಢಶಾಲಾ ಶಿಕ್ಷಕರಿಗೆ ಆಗುತ್ತಿರುವ ಒತ್ತಡಗಳ ಬಗ್ಗೆ ಚರ್ಚೆ ಮಾಡಿ, ಮನವಿ ನೀಡಲಾಯಿತು. ಹಿಂದುಳಿದ ವರ್ಗಗಳ ಜಿಲ್ಲೆಯ ಪ್ರಭಾರಿ ಅಧಿಕಾರಿ ಕವಿತಾ ಅವರನ್ನೂ ಭೇಟಿ ಮಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಮಾಡಿದವರಿಗೆ ಗಳಿಕೆ ರಜೆಯನ್ನು ಆದಷ್ಟು ಬೇಗ ಮಂಜೂರಿಗೆ ಮನವಿ ನೀಡಲಾಯಿತು. ಪರಿಶಿಷ್ಟ ಜಾತಿ ಗಣತಿ ಮಾಡಿದವರಿಗೆ ಗಳಿಕೆ ರಜೆ ನೀಡಬೇಕೆಂದು, ಕೊಡಗು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಅವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು,
ಕೊಡಗು ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಜಿ. ಕುಮಾರ್, ಜಿಲ್ಲಾ ಕಾರ್ಯದರ್ಶಿ ಎಂ. ಎಸ್. ಮಹೇಂದ್ರ, ಮಡಿಕೇರಿ ತಾಲೂಕು ಅಧ್ಯಕ್ಷ ಪಿ.ಎಸ್. ರವಿಕೃಷ್ಣ, ಸೋಮವಾರ ಪೇಟೆ ತಾಲೂಕು ಅಧ್ಯಕ್ಷ ಕೆ.ಆರ್. ರತ್ನಕುಮಾರ್, ಜಿಲ್ಲಾ ಸಂಘದ ಪದಾಧಿಕಾರಿ ಸಿ.ಹೆಚ್. ಲೋಕೇಶ್, ಸೋಮವಾರಪೇಟೆ ತಾಲೋಕು ಸಂಘದ ಉಪಾಧ್ಯಕ್ಷ ಯಶವಂತ್ ಕುಮಾರ್, ಪದಾಧಿಕಾರಿ ವಿಜಯ್ ಕುಮಾರ್ ಈ ಸಂದರ್ಭ ಇದ್ದರು.