ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಮಾತನಾಡಿದರು. ಸದಾಶಿವ ಸ್ವಾಮೀಜಿ, ವಿ.ಪಿ.ಶಶಿಧರ್ ಇತರರಿದ್ದರು.
- ಮಕ್ಕಳಿಗೆ ಶಿಕ್ಷಣ ನೀಡುವುದು ಪೋಷಕರ ಕರ್ತವ್ಯ
- ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್ ಗೌಡ
ಕುಶಾಲನಗರ: ಮಹಿಳೆಯರು ಸರ್ಕಾರದ ಮತ್ತು ಸಂಘ ಸಂಸ್ಥೆಗಳ ಯೋಜನೆಗಳ ಸದುಪಯೋಗ ಪಡೆಯುವ ಮೂಲಕ ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದರು.
ಕುಶಾಲನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಾಮೂಹಿಕ ವರ ಮಹಾಲಕ್ಷ್ಮಿ ಪೂಜಾ ಸಮಿತಿ ಹಾಗೂ ಶನೀಶ್ವರ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರ ಸಮೀಪ ಗೊಂದಿ ಬಸವನಹಳ್ಳಿ ಗ್ರಾಮದಲ್ಲಿ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ ನೀಡುವುದು ಪೋಷಕರ ಆದ್ಯ ಕರ್ತವ್ಯ. ಶಿಕ್ಷಣ ಶಾಶ್ವತ ಆಸ್ತಿಯಾಗಿದ್ದು, ಆ ಮೂಲಕ ಜೀವನದ ಗುರಿ ತಲುಪಲು ಸಾಧ್ಯ ಎಂದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಮಾಜದ ತಳಮಟ್ಟದ ಜನರಿಗೆ ಅಗತ್ಯವಿರುವ ಆರ್ಥಿಕ, ಸಾಮಾಜಿಕ ಯೋಜನೆಗಳನ್ನು ತಲುಪಿಸುತ್ತಿರುವ ಬಗ್ಗೆ ಶಾಸಕರು ಹೆಮ್ಮೆ ವ್ಯಕ್ತಪಡಿಸಿದರು.
ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಕಷ್ಟು ಯೋಜನೆಗಳು ಸಮಾಜದ ಬಹುತೇಕ ಜನರಿಗೆ ಸಹಕಾರಿಯಾಗಿದೆ. ಮಹಿಳೆಯರು ಆರ್ಥಿಕ ಸಬಲೀಕರಣ ಹೊಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು ಯೋಜನೆಯ ಸಾಲ ಪಡೆದುಕೊಂಡು ಅದರ ಮರುಪಾವತಿ ಹಾಗೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ದೇವರ ಹೆಸರು ಕೆಡಿಸುವವರ ಉದ್ಧಾರ ಅಸಾಧ್ಯ ಎಂದ ರಂಜನ್, ಧರ್ಮಸ್ಥಳ ಕ್ಷೇತ್ರದ ಹೆಸರನ್ನು ಕೆಡಿಸಲು ಯತ್ನಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕ್ಷೇತ್ರ ಧರ್ಮಸ್ಥಳ ಯೋಜನೆಯ ಮೂಲಕ ಮಹಿಳೆಯರ ಬದುಕಿನ ಬಲವರ್ಧನೆ ಸಾಧ್ಯವಾಗಿದೆ ಎಂದ ಅವರು ಸಮಾಜ ನಿಂತ ನೀರಾಗಬಾರದು. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದರು.
ಕ್ಷೇತ್ರದ ವಿವಿಧ ಯೋಜನೆಗಳ ಮೂಲಕ ಜನರನ್ನು ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರ ಯೋಜನೆಯ ಜಿಲ್ಲಾ ನಿರ್ದೇಶಕ ವಿಠ್ಠಲ ಸಾಲಿಯಾನ್ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಂಸ್ಕಾರವಂತರಾಗಬೇಕು. ಪೂಜೆ ಪುರಸ್ಕಾರಗಳ ಮೂಲಕ ಶಾಂತಿ ನೆಮ್ಮದಿ ಗಳಿಸಲು ಸಾಧ್ಯ ಎಂದ ಅವರು ಜಲಮೂಲಗಳ ಸಂರಕ್ಷಣೆ ಪ್ರಕೃತಿಯ ಆರಾಧನೆ ಹಾಗೂ ಸಾಮಾಜಿಕ ಪ್ರಜ್ಞೆ ಮೂಲಕ ಸಮಾಜದಲ್ಲಿ ಪ್ರತಿಯೊಬ್ಬರು ಉತ್ತಮ ಬದುಕು ರೂಪಿಸಿಕೊಳ್ಳುವಂತಾಗಬೇಕು ಎಂದರು.
ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಾದ ನೀಡಿದ ಶ್ರೀಗಳು, ಮಹಿಳೆಯರು ಶಿಕ್ಷಣದ ಆರ್ಥಿಕ ಸಬಲತೆ ಗಳಿಸುವುದರೊಂದಿಗೆ ಮಾನಸಿಕ ಸದೃಢತೆ ಹೊಂದುವಂತಾಗಬೇಕು. ಜೀವನದ ಮೌಲ್ಯಗಳು ಕಡಿಮೆಯಾದಲ್ಲಿ ಎಲ್ಲಾ ರಂಗಗಳಲ್ಲಿ ಪರಿಣಾಮ ಬೀರುತ್ತದೆ. ಪರಸ್ಪರ ಪ್ರೀತಿ ವಿಶ್ವಾಸ ಮೂಲಕ ಬದುಕು ರೂಪಿಸಿಕೊಂಡಲ್ಲಿ ನೆಮ್ಮದಿ ಕಾಣಬಹುದು ಎಂದ ಶ್ರೀಗಳು ಪೂಜೆಗಳು ಶ್ರದ್ದೆಯ ಪೂಜೆ ಆಗಬೇಕೆ ಹೊರತು ಆಡಂಬರದ ಪೂಜೆ ಆಗಬಾರದು ಎಂದರು. ನಾಡಿನ ಒಳಿತಿಗಾಗಿ ಪ್ರತಿಯೊಬ್ಬರು ಸಾಮೂಹಿಕವಾಗಿ ಪ್ರಾರ್ಥಿಸ ಬೇಕಾಗಿದೆ ಎಂದರು.
ವರಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷ ಎಂ.ಬಿ.ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಬಿ.ಜಿ.ಮಂಜುನಾಥ್, ಜನಜಾಗೃತಿ ವೇದಿಕೆ ಕೊಡಗು ಜಿಲ್ಲಾ ಸದಸ್ಯರಾದ ಎಂ.ಎನ್.ಚಂದ್ರಮೋಹನ್, ಪುರಸಭಾ ನಾಮ ನಿರ್ದೇಶಕ ಸದಸ್ಯರುಗಳಾದ ಎಂ.ಎಂ.ಪ್ರಕಾಶ್, ಬಿ.ಜಿ.ಜಗದೀಶ್, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಗೋವಿಂದಪ್ಪ, ಶನೇಶ್ವರ ದೇವಾಲಯ ಅಧ್ಯಕ್ಷ ಜಿ.ಜಿ.ಮಂಜಪ್ಪ ಉಪಾಧ್ಯಕ್ಷರುಗಳಾದ ಮಂಜುಳಾ ದಿವಾಕರ್, ಮಲ್ಲಿಗೆ ತಿಮ್ಮಪ್ಪ, ಕಾರ್ಯದರ್ಶಿ ಪವಿತ್ರಾಕ್ಷಿ, ಕ್ಷೇತ್ರ ಯೋಜನೆಯ ಯೋಜನಾಧಿಕಾರಿ ಹನುಮಂತಪ್ಪ ಮತ್ತಿತರರು ಇದ್ದರು.
ಈ ಸಂದರ್ಭದಲ್ಲಿ ಅರ್ಚಕರಾದ ಕೆ.ಗೌಡಯ್ಯ ಮತ್ತು ರಾಮ ನಾಯಕ ದಂಪತಿಗಳನ್ನು ಮತ್ತು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಗುಡ್ಡೆ ಹೊಸೂರು ವಲಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ, ವರಲಕ್ಷ್ಮಿ ಪೂಜಾ ಸಮಿತಿ ಗುಡ್ಡೆ ಹೊಸೂರು ವಲಯ ಮತ್ತು ಯೋಜನೆಯ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಕಾರ್ಯಕರ್ತರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ಸದಾಶಿವ ಸ್ವಾಮೀಜಿ ಮತ್ತು ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚು ರಂಜನ್ ಮತ್ತಿತರರು ಗೊಂದಿ ಬಸವನಹಳ್ಳಿ ಮಾರಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಶನೇಶ್ವರ ದೇವಾಲಯಕ್ಕೆ ತೆರಳಿದರು.