ಮಡಿಕೇರಿಯಲ್ಲಿ ನಡೆದ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ವಾರ್ಷಿಕ ಪ್ರತಿಭಾ ಪುರಸ್ಕಾರ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ನಾಲ್ವರು ಸಾಧಕರನ್ನು ಸನ್ಮಾನಿಸಲಾಯಿತು. ಹೆಚ್.ಟಿ. ಅನಿಲ್, ರಾಮಚಂದ್ರ ಮೂಗೂರು, ಡಾ. ರಾಜಾರಾಮ್, ಬಿ.ಕೆ. ಜಗದೀಶ್, ಭರತೇಶ್ ಖಂಡಿಗೆ, ಜಿ.ಆರ್. ರವಿಶಂಕರ್, ಸವಿತಾ ಭಟ್ ಮತ್ತಿತರರು ಇದ್ದರು.
ಈಗಿನ ತಲೆಮಾರಿನ ಜೆನ್ ಜಿ ಪೀಳಿಗೆಗೆ ತಕ್ಕಂತೆ ಡಿಜಿಟಲ್ ಮಾಧ್ಯಮದಲ್ಲಿಯೇ ಧರ್ಮ ಮತ್ತು ಜೀವನ ಸಂಸ್ಕಾರವನ್ನು ಕಲಿಸುವ ನಿಟ್ಟಿನಲ್ಲಿ ಬ್ರಾಹ್ಮಣ ಸಮಾಜ ಕಾರ್ಯಯೋಜನೆ ರೂಪಿಸಬೇಕೆಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ತು ಅಧ್ಯಕ್ಷ ಹೆಚ್.ಟಿ. ಅನಿಲ್ ಹೇಳಿದರು. ಇಲ್ಲಿನ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ವಾರ್ಷಿಕ ಪ್ರತಿಭಾ ಪುರಸ್ಕಾರ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಿಜಿಟಲ್ ಯುಗದಲ್ಲಿ ಜನಿಸಿದ ಜೆನ್ ಜಿ ಮತ್ತು ಆಲ್ಫಾ ಪೀಳಿಗೆ ಮೊಬೈಲ್, ಇಂಟರ್‌ನೆಟ್ ಹೊರತಾಗಿ ಜೀವನವನ್ನೇ ಯೋಚಿಸುತ್ತಿಲ್ಲ. ಹಳೇ ತಲೆಮಾರಿನ ಸಂಸ್ಕೃತಿ, ಸಂಪ್ರದಾಯ, ಲೇಖಕರು, ಸಾಹಿತ್ಯದ ಪರಿಚಯವೂ ಈ ಪೀಳಿಗೆಗೆ ಇಲ್ಲ. ಈ ನಿಟ್ಟಿನಲ್ಲಿ ಬ್ರಾಹ್ಮಣ ಸಮಾಜ ವಾರಕ್ಕೊಂದು ದಿನವಾದರೂ ನವಪೀಳಿಗೆ ಸೇರಿದಂತೆ ವಿದ್ಯಾರ್ಥಿಗಳಿಗೆ ಧರ್ಮ ಶಿಕ್ಷಣದಂಥ ಕಾರ್ಯಕ್ರಮ ರೂಪಿಸಬೇಕು.
ಆಧುನಿಕ ದಿನಗಳಲ್ಲಿ ಕೌಟುಂಬಿಕ ಸಂಬAದಗಳು ಮೌಲ್ಯ ಕಳೆದುಕೊಳ್ಳುತ್ತಿದೆ. ಬ್ರಿಟನ್ ಲೇಖಕ ಸ್ಟೀಫನ್ ಫ್ರೈ ಹೇಳಿದಂತೆ ಒಂದೇ ಮನೆಯಲ್ಲಿ ಐದಾರು ದೇಶಗಳ ಸಂಸ್ಕೃತಿ ಕಂಡುಬರುತ್ತಿದೆ. ಪ್ರತಿಯೋರ್ವರನ್ನೂ ಬೆಸೆಯುವದಕ್ಕಾಗಿ ನೂರಾರು ಉಪಕರಣಗಳಿದ್ದರೂ ಎಲ್ಲರೂ ಒಂಟಿತನ ಅನುಭವಿಸುತ್ತಿರುವುದು ಆಧುನಿಕಕಾಲದ ಡಿಜಿಟಲ್ ಯುಗದ ವಿಪರ್ಯಾಸವಾಗಿದೆ ಎಂದರು.
ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷ ರಾಮಚಂದ್ರ ಮೂಗೂರು ಮಾತನಾಡಿ, ನಿಧಿಯ ಸಭಾಂಗಣದ ಮೇಲಂತಸ್ತಿನ ಕಾಮಗಾರಿಯನ್ನು ಸಮುದಾಯಬಾಂಧವರ ಸಹಕಾರದೊಂದಿಗೆ ಈ ವರ್ಷವೇ ಕೈಗೊಳ್ಳಲಾಗುತ್ತದೆ. ಬ್ರಾಹ್ಮಣ ಸಮುದಾಯದವರ ಪ್ರತಿಭೆಯನ್ನು ಪ್ರೋತ್ಸಾಹಿಸಲು ವರ್ಷಂಪ್ರತಿಯಿAತೆಯೇ ಈ ಬಾರಿಯೂ ಕ್ರೀಡಾ ಸ್ಪರ್ಧೆ, ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು. ಕೊಡಗು ಜಿಲ್ಲೆಯಾದ್ಯಂತ ಬ್ರಾಹ್ಮಣ ಸಮುದಾಯದವರ ಸಂಘಟನೆಗೆ ಮುಂದಿನ ದಿನಗಳಲ್ಲಿ ಕಾರ್ಯಯೋಜನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಕ್ರೀಡಾ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿಯ ವೈದ್ಯ ಡಾ. ರಾಜಾರಾಮ್, ಸಮಾಜ ಒಂದಾಗಿ ಪ್ರತಿಬಿಂಬಿಸಲು ಕ್ರೀಡೆ ಅತ್ಯಂತ ಪ್ರಯೋಜನಕಾರಿಯಾಗಿದೆ. ದಕ್ಷಿಣ ಹಾಗೂ ಉತ್ತರ ಕೊಡಗು ಒಂದುಗೂಡಿ ಈ ಬಾರಿ ಬ್ರಾಹ್ಮಣ ಸಮಾಜದ ಕ್ರೀಡೆಯನ್ನು ಆಯೋಜಿಸಿದ್ದು ಐಕ್ಯತೆಯ ಸೂಚಕವಾಗಿದೆ. ಸಮಾಜದ ಬಾಂಧವ್ಯ ವೃದ್ಧಿಗೆ ಇದು ಒಂದು ಉತ್ತಮವಾದ ಹಾದಿ. ಮಹಾಭಾರತದ ಕಾಲದಲ್ಲಿ ದ್ರೋಣಾಚಾರ್ಯರು ಐಕ್ಯತೆಗಾಗಿ ಕ್ರೀಡೆಗಳನ್ನು ಬಳಸಿದ್ದರು. ಸಮಾಜದ ಒಳಿತಿಗೆ ಹಾಗೂ ಬ್ರಾಹ್ಮಣರ ಒಗ್ಗೂಡುವಿಕೆಗೆ ಈ ಹೊಸ ಮಾರ್ಗ ಮುಂದಿನ ದಿನಗಳಲ್ಲಿ ಸಮಾಜದ ಅಭ್ಯುದಯಕ್ಕೆ ಕಾರಣವಾಗಲಿದೆ ಎಂದರು.
ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಉಪಾಧ್ಯಕ್ಷ ಭರತೇಶ್ ಖಂಡಿಗೆ, ಖಜಾಂಜಿ ಜಿ.ಆರ್. ರವಿಶಂಕರ್ ನಿರ್ದೇಶಕರಾದ ಸವಿತಾ ಭಟ್, ಮಂಜುಳಾ ಭಟ್, ಬಿ.ಕೆ. ಅರುಣ್ ಕುಮಾರ್, ಪಿ.ವಿ. ಅಶೋಕ್ ಮತ್ತಿತರರು ಇದ್ದರು.
ಬ್ರಾಹ್ಮಣ ಸಮಾಜದ ನಾಲ್ವರು ಸಾಧಕರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಕೊಡಗು ಮೂಲದ ಸಕಲೇಶಪುರದಲ್ಲಿ ನೆಲಸಿರುವ ಕಾಫಿ ಬೆಳೆಗಾರ ಕೋಗರವಳ್ಳಿ ಶಾಮರಾವ್, ಚೇರಂಬಾಣೆಯ ವೈದ್ಯ ಡಾ. ಶಂಕರನಾರಾಯಣ ಉರಾಳ, ವಿರಾಜಪೇಟೆಯ ನಿವೃತ್ತ ಶಿಕ್ಷಕಿ ಹೆಚ್.ಜಿ. ಸಾವಿತ್ರಿ, ಗಾಂಧಾರಿ ವಿದ್ಯೆಯಲ್ಲಿ ನಿಪುಣ ಗೋಣಿಕೊಪ್ಪಲುವಿನ ಪ್ರದ್ಯೋತ್ ಕಿರಣ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲೆಯಾದ್ಯಂತಲಿನಿAದ ಬ್ರಾಹ್ಮಣ ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬ್ರಾಹ್ಮಣ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಾರ್ಷಿಕ ಕ್ರೀಡೋತ್ಸವಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.