ಮೂಕೋಂಡ ಪುಷ್ಪ ದಮಯಂತಿ ರಚನೆಯ ಕೊಡಗಿನ ವಿಶೇಷತೆಯ ಸಮಗ್ರ ಸಿರಿ ಮತ್ತು ನೆನಪಿನ ಅಲೆ ಪುಸ್ತಕಗಳನ್ನು ಮಡಿಕೇರಿ ಪತ್ರಿಕಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಬಾಚರಣಿಯಂಡ ಪಿ. ಅಪ್ಪಣ್ಣ, ರಾಣು ಅಪ್ಪಣ್ಣ, ಬೊಳ್ಳಜಿರ ಅಯ್ಯಪ್ಪ, ಮಂಡೇಪAಡ ರತನ್ ಕುಟ್ಟಯ್ಯ, ಕುಳುವಂಡ ಅನಿತಾ ಸುಬ್ಬಯ್ಯ ಮತ್ತಿತರರು ಇದ್ದರು. 
ಕೊಡಗು

ಕೊಡವ ಮಕ್ಕಡ ಕೂಟ ಪ್ರಕಟಣೆಯ ಪುಸ್ತಕಗಳ ಬಿಡುಗಡೆ

ಮಡಿಕೇರಿ:
ಸಾಹಿತ್ಯ ರಚನೆಗಿಂತ ಅದನ್ನು ಬೆಳಕಿಗೆ ತರುವುದೇ ಕಠಿಣ ಕೆಲಸ ಎಂದು ಹಿರಿಯ ಸಾಹಿತಿಗಳೂ ಆದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣ ಅಭಿಪ್ರಾಯಪಟ್ಟಿದ್ದಾರೆ. ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕೊಡವ ಮಕ್ಕಡ ಕೂಟ ಪ್ರಕಟಣೆಯ 124, ಮತ್ತು 125ನೇ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ರಚನೆಯಾದ ಸಾಹಿತ್ಯವನ್ನು ಪ್ರಕಟಿಸಲು ದಾನಿಗಳು ಮುಂದೆ ಬಾರದೇ ಇದ್ದ ಕಾರಣ ಈ ಮೊದಲು ಕೊಡಗಿನ ಸಾಹಿತ್ಯ ಕ್ಷೇತ್ರ ಬರಡಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ಇದ್ದ ನಾವಿಕನ ಕೊರತೆಯನ್ನು ಕೊಡವ ಮಕ್ಕಡ ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ತುಂಬಿದ್ದಾರೆ. ಮಂಡೇಪAಡ ರತನ್ ಕುಟ್ಟಯ್ಯ ಅವರಂಥಹ ದಾನಿಗಳು ಕೃತಿಗಳ ಪ್ರಕಟಣೆಗೆ ಮುಕ್ತ ಮನಸ್ಸಿನಿಂದ ಸಹಕರಿಸುತ್ತಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಎಲೆ ಮರೆಯ ಕಾಯಿಯಂತೆ ಇರುವ ಲೇಖಕರನ್ನೆಲ್ಲಾ ಪಾತಾಳ ಗರಡಿ ಹಾಕಿ ಹುಡುಕಿ ಬೆಳಕಿಗೆ ತರುವ ಕೆಲಸ ಆಗುತ್ತಿದೆ. ಹಾಗಾಗಿಯೇ ಕೊಡವ ಮಕ್ಕಡ ಕೂಟದಿಂದ ಇಲ್ಲಿಯ ತನಕ 125 ಪುಸ್ತಕಗಳ ಬಿಡುಗಡೆ ಸಾಧ್ಯವಾಗಿದೆ. ಇನ್ನೂ ಅನೇಕ ಸಾಹಿತಿಗಳು ತಮ್ಮ ಕೃತಿ ಹೊರತರಲು ಅನೇಕ ಕಾರಣಗಳಿಂದ ಹಿಂಜರಿಯುತ್ತಾರೆ. ಇಂಥವರನ್ನೆಲ್ಲಾ ಗುರುತಿಸಿ ಅವರ ಸಾಹಿತ್ಯವೂ ಪುಸ್ತಕ ರೂಪದಲ್ಲಿ ಹೊರಬರುವಂತೆ ಮಾಡಬೇಕಾದ ಅಗತ್ಯವಿದೆ. ಕೊಡಗಿನ ಲೇಖಕರು ಕೊಡವ, ಕನ್ನಡ ಮಾತ್ರವಲ್ಲದೇ ಎಲ್ಲಾ ಭಾಷೆಯಲ್ಲೂ ಪುಸ್ತಕಗಳನ್ನು ಬರೆಯುವಂತಾಗಲಿ ಎಂದು ಆಶಿಸಿದರು.
ಉದ್ಯಮಿ ಮಂಡೇಪAಡ ರತನ್ ಕುಟ್ಟಯ್ಯ ಮಾತನಾಡಿ ಇಂದಿನ ಡಿಜಿಟಲ್ ಯುಗದಲ್ಲಿ ಸಾಹಿತ್ಯ ಬೆಳೆಸುವುದು ಕಷ್ಟದ ಕೆಲಸ. ಇಂಥ ಪರಿಸ್ಥಿಯಲ್ಲೂ ಕೊಡವ ಮಕ್ಕಡ ಕೂಟ ಸಾಹಿತ್ಯ ಪ್ರಕಟಣೆಯನ್ನು ಸವಾಲಾಗಿ ತೆಗೆದುಕೊಂಡು ಕೊಡಗಿನ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದು ಶ್ಲಾಘನಾರ್ಹ. ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ಸಾಹಿತ್ಯಗಳನ್ನು ಡಿಜಿಟಲೀಕರಣ ಮಾಡುವಂತಾಗಬೇಕು ಎಂದರು.
ಬುಧವಾರ ಬಿಡುಗಡೆ ಆದ ಕೊಡಗಿನ ವಿಶೇಷತೆಯ ಸಮಗ್ರ ಸಿರಿ ಮತ್ತು ನೆನಪಿನ ಅಲೆ ಪುಸ್ತಕಗಳ ಲೇಖಕಿ ಮೂಕೋಂಡ ಪುಷ್ಪ ದಮಯಂತಿ ಪೂಣಚ್ಚ ಮಾತನಾಡಿ ಪುಸ್ತಕ ಬರೆಯುವುದು ಸುಲಭ. ಪ್ರಕಟಿಸುವುದು ಕಷ್ಟ ಎನ್ನುವುದು ನನ್ನ ಅನುಭವಕ್ಕೂ ಬಂದಿದೆ. ಬೆಂಗಳೂರಿನAಥ ನಗರದಲ್ಲಿ ಇದು ಇನ್ನೂ ಕಠಿಣ ಎನ್ನುವುದು ನನ್ನ ಅರಿವಿಗೆ ಬಂದಿದೆ. ಕೊಡಗು ಸುಂದರವಾದ ಜಿಲ್ಲೆ. ಇಲ್ಲಿಯ ಪದ್ಧತಿ, ಪರಂಪರೆಯೂ ಸುಂದರವಾಗಿದೆ. ಜನರು ಸನ್ಮಾರ್ಗದಲ್ಲಿ ನಡೆಯುವ ದಾರಿಯನ್ನು ಇಲ್ಲಿನ ಪರಂಪರೆ ಹೇಳಿಕೊಡುತ್ತದೆ. ಆದರೆ ಕೊಡಗಿನ ಆಚಾರ-ವಿಚಾರ ಕ್ಷೀಣಿಸುತ್ತಿದೆ. ಕೊಡಗಿನಲ್ಲಿ ಕೊಡವರೇ ಮೂಲ ನಿವಾಸಿಗಳಾಗಿದ್ದು ಇವರಿಗೆ ಇಲ್ಲಿ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವ ಮಕ್ಕಡ ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಮಾತನಾಡಿ ತಮ್ಮ ಸಂಘಟನೆ ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳವಣಿಗೆ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿಸಿಕೊಂಡಿದೆ. ಈ ವರ್ಷ ಜನವರಿಯಿಂದ ಇಲ್ಲಿಯ ತನಕ 4 ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಹಲವು ಪುಸ್ತಕಗಳು ಮುದ್ರಣ ಹಂತದಲ್ಲಿ ಇವೆ. ತಾವು ಪ್ರಕಟಿಸುವ ಯಾವುದೇ ಪುಸ್ತಕಗಳನ್ನು ಮಾರಾಟ ಮಾಡುವುದಿಲ್ಲ. ಬದಲಿಗೆ ಆಸಕ್ತ ಓದುಗರಿಗೆ ಉಚಿತವಾಗಿ ತಲುಪಿಸಲಾಗುತ್ತದೆ ಎಂದರು.
ಸಾಹಿತಿ ಬಾಚರಣಿಯಂಡ ರಾಣು ಅಪ್ಪಣ್ಣ, ಸಮಾಜ ಸೇವಕಿ ಕುಳುವಂಡ ಅನಿತಾ ಸುಬ್ಬಯ್ಯ ಈ ಸಂದರ್ಭ ಇದ್ದರು.