ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಇಳಿಕೆ ಆಗಿದೆ.
ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಬುಧವಾರ ಕಡಿಮೆ ಆಗಿದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಇಳಿದಿದೆ. ಮಡಿಕೇರಿ ಸೇರಿದಂತೆ ಹಲವೆಡೆ ಬಿಸಿಲಿನ ವಾತಾವರಣ ಕಾಣಿಸಿಕೊಂಡಿತ್ತು.
ಮಂಗಳವಾರದ ಮಳೆ ಸಂದರ್ಭ ಇಲ್ಲಿನ ಚಾಮುಂಡೇಶ್ವರಿ ನಗರದಲ್ಲಿ ರಸ್ತೆ ಮೇಲೆ ಪಕ್ಕದ ಬರೆಯ ಮಣ್ಣು ಕುಸಿದ ಸಂದರ್ಭ ಮಹಿಳೆಯೊಬ್ಬರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ನಿವಾಸಿ ನೂರ್ ಜಹಾನ್ ಪಾರಾಗಿರುವ ಮಹಿಳೆ. ಇವರು ಇದೇ ಮಾರ್ಗವಾಗಿ ತೆರಳಿತ್ತಿದ್ದ ವೇಳೆ ಪಕ್ಕದ ರಸ್ತೆ ತಲುಪಿದ ತಕ್ಷಣ ಬರೆಯ ಮಣ್ಣು ರಸ್ತೆಗೆ ಕುಸಿದಿದೆ. ಇಲ್ಲಿನ ರಸ್ತೆ ಬದಿಯ ಮಣ್ಣು ಕುಸಿದ ಪರಿಣಾಮ ಸ್ಥಳೀಯ ನಿವಾಸಿ ಪುಂಡಲೀಕ ಎಂಬುವವರ ಸೌದೆ ಶೆಡ್ ಸಂಪೂರ್ಣವಾಗಿ ಮಣ್ಣಿನೊಂದಿಗೆ ಕೊಚ್ಚಿಹೋಗಿದೆ. ಕಾರು ನಿಲುಗಡೆ ಪ್ರದೇಶವೂ ಮಣ್ಣಿನಿಂದ ಆವೃತವಾಗಿದೆ. ಚಾಮುಂಡೇಶ್ವರಿ ನಗರ ಕಡಿದಾದ ಗುಡ್ಡ ಪ್ರದೇಶದಲ್ಲಿದ್ದು 2018 ಮತ್ತು 2019ರ ಭಾರಿ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲೂ ಇಲ್ಲಿನ ಹಲವು ಮನೆಗಳು ಕೊಚ್ಚಿಹೋಗಿದ್ದವು.
2859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಬುಧವಾರದ ಮಾಹಿತಿ ಪ್ರಕಾರ 2858.33 ಅಡಿ ನೀರಿದೆ. 5,947 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ನದಿಗೆ 5,783 ಕ್ಯೂಸೆಕ್, ನಾಲೆಗೆ 600 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ಒಟ್ಟು ಸರಾಸರಿ 24.925 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಕಸಬಾ 28.6, ನಾಪೋಕ್ಲು 54.1, ಸಂಪಾಜೆ 27.9, ಭಾಗಮಂಡಲ 30.2, ವಿರಾಜಪೇಟೆ ತಾಲೂಕು ಕಸಬಾ 27.9, ಅಮ್ಮತ್ತಿ 26.3, ಸೋಮವಾರಪೇಟೆ ತಾಲೂಕು ಕಸಬಾ 16.3, ಶನಿವಾರಸಂತೆ 12.3, ಶಾಂತಳ್ಳಿ 68.6, ಕೊಡ್ಲಿಪೇಟೆ 14.5, ಪೊನ್ನಂಪೇಟೆ ತಾಲೂಕು ಪೊನ್ನಂಪೇಟೆ 16.2, ಹುದಿಕೇರಿ 42.5, ಶ್ರೀಮಂಗಲ 18.8, ಬಾಳೆಲೆ 19.4, ಕುಶಾಲನಗರ ತಾಲೂಕು ಕುಶಾಲನಗರ 10.8 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 9.7 ಮಿಮೀ ಮಳೆ ದಾಖಲಾಗಿದೆ.