ಶನಿವಾರಸಂತೆ ಸಮೀಪದ ದುಂಡಳ್ಳಿ ಗ್ರಂಥಾಲಯದಲ್ಲಿ ವಿಶ್ವ ಪುಸ್ತಕ ದಿನ ಆಚರಿಸಲಾಯಿತು. ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ, ಗ್ರಂಥಾಲಯದ ಓದುಗರು, ವಿದ್ಯಾರ್ಥಿಗಳು ಇದ್ದರು.
- ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ ಅಭಿಮತ
- ದುಂಡಳ್ಳಿ ಗ್ರಂಥಾಲಯದಲ್ಲಿ ವಿಶ್ವ ಪುಸ್ತಕ ದಿನಾಚರಣೆ
ಶನಿವಾರಸಂತೆ: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯದಲ್ಲಿ ಗುರುವಾರ ವಿಶ್ವ ಪುಸ್ತಕ ದಿನ ಆಚರಿಸಲಾಯಿತು.
ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ ಮಾತನಾಡಿ, ಜ್ಞಾನದ ಕಣಜವಾಗಿರುವ ಪುಸ್ತಕಗಳನ್ನು ಪ್ರತಿಯೊಬ್ಬರೂ ಓದುವ ಮೂಲಕ ಜ್ಞಾನ ಸಂಪಾದಿಸಿಕೊಳ್ಳಬೇಕು. ತಾನು ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದರ ಜತೆಯಲ್ಲಿ ತಮ್ಮ ಸ್ನೇಹಿತರಿಗೂ ಪುಸ್ತಕವನ್ನು ಓದುವಂತೆ ಪ್ರೇರಿಪಿಸಬೇಕು ಎಂದರು.
ಪುಸ್ತಕಗಳನ್ನು ಓದುವುದರಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳ್ಳಲು ಪುಸ್ತಕ ಮಹತ್ವದ ಪಾತ್ರ ವಹಿಸುತ್ತದೆ. ಸಂಸ್ಕಾರ, ನಡೆನುಡಿ ಸೇರಿದಂತೆ ಆಧುನಿಕ ಮತ್ತು ವೈಜ್ಞಾನಿಕ ವಿಚಾರಗಳ ಬಗ್ಗೆಯೂ ತಿಳಿದುಕೊಳ್ಳಬಹುದು ಜೀವನ ನಡೆಸಲು ಮತ್ತು ಸಾಧನೆ ಮಾಡಲು ಸಹ ಪುಸ್ತಕಗಳು ಸಹಕಾರಿಯಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಪುಸ್ತಕದ ಪ್ರೇಮಿಯಾಗಿ ತನ್ನ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಂಥಾಲಯದ ಓದುಗರು, ವಿದ್ಯಾರ್ಥಿಗಳು, ಯುವಕ ಯುವತಿಯರು ಪಾಲ್ಗೊಂಡಿದ್ದರು.