ಚೇರಂಬಾಣೆ ಸಮೀಪದ ಬೇಂಗೂರು ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಪುನರ್‌ಪ್ರತಿಷ್ಠಾ ಹಾಗೂ ಬ್ರಹ್ಮಕಲಶೋತ್ಸವ ಭಕ್ತಿಭಾವದೊಂದಿಗೆ ನಡೆಯಿತು. ಪಟ್ಟಮಾಡ ಪೊನ್ನಪ್ಪ, ಡಿಕ್ಕಾ ಕಾಳಪ್ಪ, ಪಟ್ಟಮಾಡ ಬೋಪಣ್ಣ ಮತ್ತಿತರರು ಇದ್ದರು. 
ಕೊಡಗು

ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಪುನರ್‌ಪ್ರತಿಷ್ಠಾ ಹಾಗೂ ಬ್ರಹ್ಮಕಲಶೋತ್ಸವ

ಮಡಿಕೇರಿ:
ಚೇರಂಬಾಣೆ ವ್ಯಾಪ್ತಿಯ ಬೇಂಗೂರು ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಪುನರ್‌ಪ್ರತಿಷ್ಠಾ ಹಾಗೂ ಬ್ರಹ್ಮಕಲಶೋತ್ಸವ ನೂರಾರು ಭಕ್ತಾಧಿಗಳ ಸಂಭ್ರಮ, ಭಕ್ತಿಭಾವದೊಂದಿಗೆ ಶನಿವಾರ ನೆರವೇರಿತು.
ಚೇರಂಬಾಣೆಯಲ್ಲಿನ ಪಟ್ಟಮಾಡ ಕುಟುಂಬದ ಬೇಂಗೂರು ಗ್ರಾಮದಲ್ಲಿರುವ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪುನರ್ ನಿರ್ಮಾಣವಾದ ನೂತನ ಪ್ರಾಸಾದದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಪಂಚಲೋಹ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶಾಭಿಷೇಕ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಪಟ್ಟಮಾಡ ಕುಟುಂಬದ ಮುಂದಾಳತ್ವದಲ್ಲಿ ಆಯೋಜಿತವಾಗಿತ್ತು.
ಶ್ರೀ ಸುಬ್ರಹ್ಮಣ್ಯ ದೇವರ ಬಿಂಬ ಪ್ರತಿಷ್ಠೆ, ಜೀವಕಲಶಾಭಿಷೇಕ, ಪ್ರಾಣ ಪ್ರತಿಷ್ಠೆ, ಹೋಮ ಕಲಶಾಭಿಷೇಕ, ತತ್ವ ಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ, ಮಹಾಪೂಜೆಗಳು ನೆರವೇರಿದವು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಿತು.
ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಡಿಕೇರಿಯ ಶ್ರೀ ಕುಂದುರುಮೊಟ್ಟೆ ದೇವಾಲಯದ ಟ್ರಸ್ಟಿ ಟಿ.ಪಿ. ರಮೇಶ್, ಮನು ಮೇದಪ್ಪ, ಮಡಿಕೇರಿಯ ಶ್ರೀ ವಿಜಯವಿನಾಯಕ ದೇವಾಲಯದ ಟ್ರಸ್ಟಿ ಜಿ.ಚಿದ್ವಿಲಾಸ್, ಮುಡಾ ಅಧ್ಯಕ್ಷ ರಾಜೇಶ್ ಬಿ.ವೈ., ಪಟ್ಟಮಾಡ ಕುಟುಂಬದ ಪಟ್ಟೇದಾರ ಡಿಕ್ಕಾ ಕಾಳಪ್ಪ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪಟ್ಟಮಾಡ ಬೋಪಣ್ಣ ಪಾಲ್ಗೊಂಡಿದ್ದರು.
ದೇವಾಲಯ ಸಮಿತಿ ಅಧ್ಯಕ್ಷ ಪಟ್ಟಮಾಡ ಪೊನ್ನಪ್ಪ ಈ ಸಂದರ್ಭ ಮಾಹಿತಿ ನೀಡಿ ಪುರಾತನ ಕಾಲದ ಶ್ರೀಸುಬ್ರಹ್ಮಣ್ಯ ದೇವರ ಆಲಯದ ಜೀರ್ಣೋದ್ಧಾರ ಕಾರ್ಯವನ್ನು 55 ಲಕ್ಷ ರೂ. ವೆಚ್ಚದಲ್ಲಿ ದಾನಿಗಳ ಕೊಡುಗೆಯೊಂದಿಗೆ ಕೈಗೊಳ್ಳಲಾಗಿದೆ. ಪುರಾತನ ಕಾಲದ ಇತಿಹಾಸವಿರುವ ಈ ದೇವಾಲಯದ ಗರ್ಭಗೃಹದಲ್ಲಿ ಹಳೇ ಕಾಲದಲ್ಲಿ ಪೂಜಿಸಲ್ಪಡುತ್ತಿದ್ದ ದೇವರ ವಿಗ್ರಹಗಳೂ ಪತ್ತೆಯಾಗಿದ್ದವು. ಇದೀಗ ದೇವಾಲಯದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಮೂಲಕ ಗ್ರಾಮದಲ್ಲಿ ಶ್ರೀ ಸುಬ್ರಹ್ಮಣ್ಯ ದೇವಾಲಯವನ್ನು ಮತ್ತೆ ಪುನರ್ ಪ್ರತಿಷ್ಠಾಪಿಸಲಾಗಿದೆ ಎಂದರು.