: ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮಿಟ್ ಪ್ರಚಾರಕ್ಕಾಗಿ ಕಾಲ್ನಡಿಗೆ ಜಾಥಾವನ್ನು ಕುಶಾಲನಗರದ ಮಾರಿಯಮ್ಮ ದೇವಸ್ಥಾನದಿಂದ ರಥ ಬೀದಿಯ ಮುಖಾಂತರ ಆಂಜನೇಯ ದೇವಸ್ಥಾನದವರೆಗೂ ನಡೆಸಲಾಯಿತು.
- ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮಿಟ್ ಪ್ರಯುಕ್ತ ಜಾಥಾ
ಮಡಿಕೇರಿ: ಕರ್ನಾಟಕ ಆರ್ಯವೈಶ್ಯ ಮಹಾಸಭಾ ಬೆಂಗಳೂರು ಇವರ ವತಿಯಿಂದ ಮುಂಬರುವ ಡಿ.೨೫, ೨೬, ೨೭ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯಲಿರುವ ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮಿಟ್ ಪ್ರಚಾರಕ್ಕಾಗಿ ಕಾಲ್ನಡಿಗೆ ಜಾಥಾವನ್ನು ಕುಶಾಲನಗರದ ಮಾರಿಯಮ್ಮ ದೇವಸ್ಥಾನದಿಂದ ರಥ ಬೀದಿಯ ಮುಖಾಂತರ ಆಂಜನೇಯ ದೇವಸ್ಥಾನದವರೆಗೂ ನಡೆಸಲಾಯಿತು.
ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುಶಾಲನಗರ ಡಿವೈಎಸ್‌ಪಿ ಪಿ.ಚಂದ್ರಶೇಖರ್ ಅವರು ಉದ್ಘಾಟಿಸಿದರು.
ಈ ಸಂದರ್ಭ ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ಕರ್ನಾಟಕ ಆರ್ಯವೈಶ್ಯ ಮಹಾಸಭಾ ಸದೃಢ ಯುವ ಭಾರತದ ನಿರ್ಮಾಣಕ್ಕಾಗಿ ಪಣತೊಟ್ಟಿದೆ. ಇದರ ಅಂಗವಾಗಿ ಮುಂಬರುವ ವರ್ಷಗಳಲ್ಲಿ ೫೦೦೦ ಸ್ಟಾಟ್ ಅಪ್ ಕಂಪನಿಗಳನ್ನು ಪ್ರಾರಂಭಿಸಲು ೫ ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಕಲ್ಪಿಸುವಂತಹ ವೇದಿಕೆಯನ್ನು ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮಿಟ್ ಎಂಬ ಶೀರ್ಷಿಕೆಯಲ್ಲಿ ಒಂದೇ ವೇದಿಕೆಯಲ್ಲಿ ಮಾಹಿತಿ, ತರಬೇತಿ, ಸಹಕಾರ ನೀಡುವ ಅವಕಾಶವನ್ನು ಕಲ್ಪಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲಾ ಬಾಂಧವರಗಳು ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಬಿ.ಎಲ್.ಸತ್ಯನಾರಾಯಣ, ಮಡಿಕೇರಿಯ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ವಿ.ಎಸ್.ಚಂದ್ರಶೇಖರ್, ಕಾರ್ಯದರ್ಶಿ ಕೆ.ಪ್ರವೀಣ್, ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ.ಅಮೃತ್ ರಾಜ್, ಆರ್ಯವೈಶ್ಯ ಮಹಿಳಾ ಮಂಡಳಿಯ ಅಧ್ಯಕ್ಷೆ ವಾಣಿ ಮಹೇಶ್, ವಾಸವಿ ಯುವಜನ ಸಂಘದ ಅಧ್ಯಕ್ಷ ವಿ.ಜೆ.ಬಾಲಾಜಿ, ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಅನುಷಾ ಅರ್ಜುನ್, ವಾಸವಿ ದೀಕ್ಷಾ ಸಮಿತಿಯ ಅಧ್ಯಕ್ಷ ಕೆ.ಜೆ.ಚಿನ್ನಸ್ವಾಮಿ, ವಾಸವಿ ಕ್ಲಬ್‌ನ ಅಧ್ಯಕ್ಷ ವಿ.ಆರ್.ಮಂಜುನಾಥ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ಕುಶಾಲನಗರದ ಪ್ರಮುಖ ಬೀದಿಯಲ್ಲಿ ಘೋಷವಾಕ್ಯಗಳೊಂದಿಗೆ ಮೆರವಣಿಗೆ ನಡೆಯಿತು.