ಹಿಮವನ ಪ್ರತಿಭಾ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪುಟಾಣಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಲೋಕೇಶ್ ಸಾಗರ್, ಟೋಮಿ ತೋಮಸ್, ಜಯಲಕ್ಷ್ಮೀ ಇತರರಿದ್ದರು.
- ಪಾಲಕರಿಗೆ ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಸಲಹೆ
ಮಡಿಕೇರಿ: ಮಕ್ಕಳನ್ನು ಅವರವರ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಸಿ ಬೆಳೆಸುವುದೇ ನಿಜವಾದ ಶಿಸ್ತು ಎಂದು ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಹೇಳಿದರು.
ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಹಿಮವನ ಪ್ರತಿಭಾ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳನ್ನು ನಾವು ಬೆಳೆಸುತ್ತೇವೆ. ಏಕಕಾಲದಲ್ಲಿ ಮಕ್ಕಳು ನಮ್ಮನ್ನೂ ಬೆಳೆಸುತ್ತಾರೆ. ಮಕ್ಕಳನ್ನು ಅವರವರ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಸಿ ಬೆಳೆಸುವುದೇ ನಿಜವಾದ ಶಿಸ್ತು. ಮುಂದಿನ ದಿನಗಳಲ್ಲಿ ಹಾಡು ಹೇಳುವ ಕಾರ್ಯಕ್ರಮವನ್ನೂ ಸಮರ್ಥ ಕನ್ನಡಿಗರು ಬಳಗ ಆಯೋಜಿಸುವಂತಾಗಲಿ ಎಂದರು.
ಪೊಲೀಸ್ ವೃತ್ತ ನಿರೀಕ್ಷಕ ಚಂದ್ರಶೇಖರ್ ಮಾತನಾಡಿ, ಎಳೆಯ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ ಅಭಿಮಾನ ಬೆಳೆಸುತ್ತಿರುವ ಬಳಗದ ಕೆಲಸ ಪ್ರಶಂಸಾರ್ಹ ಎಂದರು.
ಡಾ.ಶಿಲ್ಪಾ ಸತೀಶ್ ಮಾತನಾಡಿ, ಮನುಷ್ಯನ ಮೆದುಳಿನ ಬೆಳವಣಿಗೆಯ ಶೇಕಡ ತೊಂಬತ್ತರಷ್ಟು ಭಾಗ ಆರು ವರ್ಷದ ಒಳಗೇ ಆಗುತ್ತದೆ. ಇಂತಹ ಕಥಾ ಕಮ್ಮಟಗಳು ಮಕ್ಕಳಲ್ಲಿ ಧನಾತ್ಮಕ ಚಿಂತನೆ ಮೂಡಿಸಲು ಸಹಕಾರಿ. ಹಿರಿಯರು ಮಕ್ಕಳಿಗೆ ಕಥೆ ಹೇಳುವ ರೂಢಿಯನ್ನು ಉಳಿಸಿಕೊಳ್ಳಬೇಕು ಎಂದರು.
ಸಮರ್ಥ ಕನ್ನಡಿಗರು ಸಂಸ್ಥೆಯ ಜಿಲ್ಲಾ ಸಂಚಾಲಕಿ ಜಯಲಕ್ಷ್ಮೀ ಮಾತನಾಡಿ, ಕಥೆ ಹೇಳುವ ಮತ್ತು ಕಥೆ ಕೇಳುವ ಕಾರ್ಯಕ್ರಮ ಮಕ್ಕಳಲ್ಲಿ ಕಲ್ಪನಾ ಶಕ್ತಿಯನ್ನು ಹೆಚ್ಚಿಸಿ, ಭಾಷಾ ಕೌಶಲವನ್ನು ಬೆಳೆಸಲು ಸಹಕಾರಿ. ಜತೆಗೆ ಏಕಾಗ್ರತೆ ಮತ್ತು ನೆನಪಿನ ಶಕ್ತಿಯ ವೃದ್ಧಿಯೊಂದಿಗೆ ನೈತಿಕ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಇಂತಹ ವಿಭಿನ್ನ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಸಾಹಿತ್ಯಾಶಕ್ತಿ ಹಾಗೂ ಕನ್ನಡ ಭಾಷೆಯ ಮೇಲೆ ಮಕ್ಕಳಿಗೆ ಹೆಚ್ಚು ಆಸಕ್ತಿ ವಹಿಸಲು ಸಹಕಾರಿಯಾಗುವುದಲ್ಲದೆ ಮಕ್ಕಳಲ್ಲಿ ಭಾವೈಕ್ಯದ ಬೀಜ ಬಿತ್ತಲು ಸಹಕಾರಿಯಾಗುವುದೆಂದು ಹೇಳಿದರು.
ವಿರಾಜಪೇಟೆ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ನಾ ಕನ್ನಡಿಗ ಟೋಮಿ ತೋಮಸ್ ಮಾತನಾಡಿ, ಅನೇಕ ವರ್ಷಗಳಿಂದ ಕೊಡಗಿನ ಸಮರ್ಥ ಕನ್ನಡಿಗರ ಸಂಘಟನೆಯು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸಿ ಸನ್ಮಾನಿಸುವ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದೆ. ಇಂತಹ ಕಾರ್ಯಕ್ರಮಕ್ಕೆ ಪಾಲಕರು ಸಹಕಾರ ಅಗತ್ಯ ಎಂದು ಹೇಳಿದರು.
ತೀರ್ಪುಗಾರರಾಗಿ ಲೇಖಕಿಯರಾದ ಸಹನಾ ಕಾಂತಬೈಲು, ರಾಧಿಕಾ ವಿಶ್ವನಾಥ್ ಹಾಗೂ ವಿಜಯಲಕ್ಷ್ಮೀ ಮತ್ತು ಶಶಿಕಿರಣ ಪಾಲ್ಗೊಂಡಿದ್ದರು. ಒಟ್ಟು ಎಪ್ಪತ್ತಾರು ಪುಟಾಣಿಗಳು ಕಥೆ ಹೇಳುವ ಕಮ್ಮಟದಲ್ಲಿ ಪಾಲ್ಗೊಂಡಿದ್ದರು.