ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಭರ್ತಿ ಆಗಿರುವುದು 
ಕೊಡಗು

ಕೊಡಗಿನಲ್ಲಿ ಮತ್ತೆ ಮಳೆ ಚುರುಕು

ಸುನಿಲ್ ಪೊನ್ನೇಟಿ
ಮಡಿಕೇರಿ:
ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಈಚೆಗೆ ಮಳೆಯ ಪ್ರಮಾಣ ಚೇತಿರಿಸಿಕೊಂಡಿದೆ. ಕೊಡಗಿನಾದ್ಯಂತ ಉತ್ತಮ ಮಳೆ ಆಗುತ್ತಿದೆ. ಕಾವೇರಿ ಉಗಮ ಸ್ಥಾನ ತಲಕಾವೇರಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿ ಆಗಿದ್ದು, ಭಾಗಮಂಡಲ-ನಾಪೋಕ್ಲು ರಸ್ತೆ ಸನಿಹಕ್ಕೆ ಪ್ರವಾಹದ ನೀರು ಬಂದಿದೆ. ಅಲ್ಲಲ್ಲಿ ಸಣ್ಣ ಪುಟ್ಟ ಬರೆ ಕುಸಿತದ ಪ್ರಕರಣಗಳು ವರದಿಯಾಗಿದ್ದು, ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಮಡಿಕೇರಿ ಜಲಾಶಯ ಬಡಾವಣೆ ರಸ್ತೆಯಲ್ಲಿ ರಸ್ತೆ ಬದಿಯ ಮಣ್ಣು ಕುಸಿದಿದೆ.
ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ. ಮಂಗಳವಾರದ ನೀರಿನ ಒಳಹರಿವು 3,638 ಕ್ಯೂಸೆಕ್. ಕಳೆದ ವರ್ಷ ಇದೇ ದಿನ 2,533 ಕ್ಯೂಸೆಕ್ ಒಳಹರಿವು ಇತ್ತು. ನದಿಗೆ 4375 ಕ್ಯೂಸೆಕ್, ನಾಲೆಗೆ 600 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 1500 ಕ್ಯೂಸೆಕ್, ನಾಲೆಗೆ 500 ಕ್ಯೂಸೆಕ್ ಇತ್ತು. ಅಣೆಕಟ್ಟೆಯ ಗರಿಷ್ಠ ಮಟ್ಟ 2,859 ಅಡಿಗಳು. ಪ್ರಸ್ತುತ ನೀರಿನ ಮಟ್ಟ 2858.45 ಅಡಿಗಳು. ಕಳೆದ ವರ್ಷ ಇದೇ ದಿನ 2857.80 ಅಡಿ ನೀರಿತ್ತು.
24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 37 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.05 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1348.74 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2428.29 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 85.35 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 36.15 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 23.85 ಮಿ.ಮೀ.,
ಸೋಮವಾರಪೇಟೆ ತಾಲೂಕಿನಲ್ಲಿ 22.85 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 16.80 ಮಿ.ಮೀ. ಮಳೆಯಾಗಿದೆ.
ಮಡಿಕೇರಿ 76.60, ನಾಪೋಕ್ಲು 53.70, ಸಂಪಾಜೆ 105.90, ಭಾಗಮಂಡಲ 105.20, ವಿರಾಜಪೇಟೆ 37.90, ಅಮ್ಮತ್ತಿ 34.40, ಹುದಿಕೇರಿ 43.60, ಶ್ರೀಮಂಗಲ 29.50, ಪೊನ್ನಂಪೇಟೆ 14.20, ಬಾಳೆಲೆ 8.10, ಸೋಮವಾರಪೇಟೆ 22.30, ಶನಿವಾರಸಂತೆ 12.80, ಶಾಂತಳ್ಳಿ 46.80, ಕೊಡ್ಲಿಪೇಟೆ 9.50, ಕುಶಾಲನಗರ 16.10 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 17.50 ಮಿ.ಮೀ. ಸರಾಸರಿ ಮಳೆಯಾಗಿದೆ.
ಈ ಮಧ್ಯೆ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ನೆಲದಲ್ಲಿ ತೇವಾಂಶ ಹೆಚ್ಚಾಗಿ, ಅಧಿಕ ಭಾರದ ವಾಹನಗಳು ಸಂಚರಿಸಿದಲ್ಲಿ ಭೂ ಕುಸಿತ ಉಂಟಾಗಿ ಅನಾಹುತಗಳಾಗುವ ಸಾಧ್ಯತೆ ಹೆಚ್ಚಿರುವುದರಿಂದ ಅ.17ರ ತನಕ ಇದ್ದ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನಗಳ ಸಂಚಾರ ನಿಷೇಧವನ್ನು ಈ ತಿಂಗಳ 31ರ ತನಕ ವಿಸ್ತರಿಸಿ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಂಗಳವಾರ ಆದೇಶ ಮಾಡಿದ್ದಾರೆ.
"

ಒಡಿಸ್ಸಾದಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತ ಮುಂದುವರಿದಿದ್ದು, ಆಗಸ್ಟ್ 27ರ ಬೆಳಗ್ಗೆ ವೇಳೆಗೆ ಕ್ಷೀಣಿಸುವ ಸಾಧ್ಯತೆಯಿದೆ. ಇದರಿಂದಾಗಿ ರಾಜ್ಯದಲ್ಲಿ ಮಳೆಯ ಅಬ್ಬರ ತಗ್ಗಲಿದೆ. ಇನ್ನೊಂದೆಡೆ, ಪೆಸಿಫಿಕ್ ಸಾಗರದ ಜಪಾನ್ ದಕ್ಷಿಣ ಕರಾವಳಿ ಭಾಗದಲ್ಲಿ ಸೃಷ್ಟಿಯಾಗಿರುವ ಭೀಕರ ಚಂಡಮಾರುತ ಮತ್ತಷ್ಟು ಪ್ರಬಲಗೊಳ್ಳುತ್ತಿದ್ದು, ಆ. 28 ಅಥವಾ 29ರ ಹೊತ್ತಿಗೆ ತೈವಾನ್ ಮಾರ್ಗವಾಗಿ ಚೀನಾ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ.

— ಡಾ. ಜಿ.ವಿ. ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ, ಮೈಸೂರು