ರಾಷ್ಟ್ರೀಯ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.
- ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಔಷಧಿ ದಾಸ್ತಾನು ಮಾಡಿ
- ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್
ಮಡಿಕೇರಿ: ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಔಷಧಿ ದಾಸ್ತಾನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿಗೂ ಹಾವು ಕಡಿತದಿಂದ ಜನರು ಸಾವು ನೋವಿಗೆ ತುತ್ತಾಗುತ್ತಿದ್ದು, ಸರಿಯಾದ ಮಾಹಿತಿ ಹೊಂದದೇ ಇರುವುದೇ ಇದಕ್ಕೆ ಕಾರಣವಾಗಿದೆ. ಹಾವು ಕಡಿತದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯ ಕುರಿತಂತೆ ಮಾಹಿತಿ ಹೊಂದುವುದು ಅಗತ್ಯ. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ರೂಪಿಸುವಂತೆ ಸಲಹೆ ನೀಡಿದರು.
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಹಾವು ಕಡಿತದಿಂದ ಸಾವು-ನೋವುಗಳು ಸಂಭವಿಸದಂತೆ ತಡೆಯಲು ಅಧಿಕಾರಿಗಳು ಶ್ರಮಿಸಬೇಕು. ಜಿಲ್ಲೆಯ ಮತ್ತು ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಾವು ವಿಷ ನಿರೋಧಕ ಔಷಧಿ ದಾಸ್ತಾನು ಇರಬೇಕು. ತುರ್ತು ಸಂದರ್ಭದಲ್ಲಿ ಹಾವು ಕಡಿತಕ್ಕೊಳಗಾದವರಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ನಿರಂತರ ತರಬೇತಿ ಆಯೋಜಿಸಲು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವಗೆ ೧೪೪ ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, ಹಾವು ಕಡಿತಕ್ಕೆ ಚಿಕಿತ್ಸೆ ನೀಡಿ, ಗುಣಮುಖರಾಗಿದ್ದಾರೆ. ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಔಷಧಿ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಹಾವು ಕಚ್ಚುವಿಕೆ ತಡೆ, ಚಿಕಿತ್ಸೆ, ಮೂಡನಂಬಿಕೆ ನಿವಾರಣೆ ಹಾಗೂ ತ್ವರಿತ ಚಿಕಿತ್ಸೆಯ ಕುರಿತು ಗ್ರಾಮ, ಶಾಲೆ ಹಾಗೂ ಸಮುದಾಯ ಮಟ್ಟದಲ್ಲಿ ನಿರಂತರ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯ ಔಷಧಿಗಳು, ತುರ್ತು ಚಿಕಿತ್ಸೆ ಹಾಗೂ ತರಬೇತಿ ಪಡೆದ ಸಿಬ್ಬಂದಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲಾಗುವುದು, ಹಾವು ಕಚ್ಚುವಿಕೆ ಪ್ರಕರಣಗಳ ತ್ವರಿತ ಚಿಕಿತ್ಸೆ, ಮೇಲ್ವಿಚಾರಣೆ, ವರದಿಗೊಳಿಸಲಾಗುವುದು. ಅಲ್ಲದೇ ವೈದ್ಯರು, ಸಿಬ್ಬಂದಿ, ಆಶಾ, ಎಎನ್‌ಎಂ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ರಾಷ್ಟ್ರೀಯ ಚಿಕಿತ್ಸಾ ಮಾರ್ಗಸೂಚಿಗಳಂತೆ ನಿಯಮಿತ ತರಬೇತಿ ನೀಡಲಾಗುವುದು ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾವು ಕಚ್ಚುವಿಕೆ ತಡೆ ಕುರಿತು ಜನಜಾಗೃತಿ ಕಾರ್ಯಕ್ರಮ ಆಯೋಜಿಸುವುದು. ಗ್ರಾಮ ಮಟ್ಟದ ಆರೋಗ್ಯ ಮತ್ತು ಸ್ವಚ್ಛತಾ ಸಮಿತಿಗಳ ಮೂಲಕ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದರು.
ಅರಣ್ಯ ಇಲಾಖೆಯಿಂದ ಅರಣ್ಯ ಅಂಚಿನ ಗ್ರಾಮಗಳಲ್ಲಿ ಹಾವು ಕಚ್ಚುವಿಕೆ ತಡೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅಪಾಯಕಾರಿ ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿ ಸ್ಥಳಾಂತರಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭ ಜಿಲ್ಲಾಧಿಕಾರಿ ಎಸ್.ಜೆ.ಸೋಮವಶೇಖರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮನೆಗಳಲ್ಲಿ ಹಾವುಗಳು ಕಂಡು ಬಂದಲ್ಲಿ ಹಾವು ರಕ್ಷಕರ ಮಾಹಿತಿ ಇಲ್ಲದಿರುವುದರಿಂದ ಇಲಾಖೆಯ ಮೂಲಕ ಹಾವು ರಕ್ಷಕರ ಮೊಬೈಲ್ ನಂಬರ್‌ಗಳನ್ನು ಸಾರ್ವಜನಿಕವಾಗಿ ಮಾಹಿತಿ ನೀಡಬೇಕು ಎಂದರು.
ಸಭೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಂಜುಡಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಅರಣ್ಯ ಇಲಾಖೆಯ ಅಧಿಕಾರಿ, ಜಿಲ್ಲಾ ಬಾಲ ಕಾರ್ಮಿಕ ಯಓಜನಾ ಸೊಸೈಟಿಯ ಯೋಜನಾ ನಿರ್ದೇಶಕ ಆರ್.ಶೀರಾರ್ ಇದ್ದರು.