ಸೋಮವಾರಪೇಟೆ ತಾಲೂಕಿನ ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ದಾನಿಗಳನ್ನು ಸನ್ಮಾನಿಸಲಾಯಿತು. ವಸಂತ್, ಯೋಗೇಶ್, ಉಮೇಶ್ ಇದ್ದರು. 
ಕೊಡಗು

ಐಗೂರು ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ

ನಾಗೇಶ ಎಸ್

ಸೋಮವಾರಪೇಟೆ: ತಾಲೂಕಿನ ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ಶಾಲಾ ಅಭಿವೃದ್ಧಿಗೆ ಧನ ಸಹಾಯ ಮಾಡಿದ ದಾನಿಗಳಿಗೆ ಸನ್ಮಾನ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ದಾನಿಗಳಾದ ಮಣವಟ್ಟೀರ ಹರೀಶ್ ಅಯ್ಯಣ್ಣ, ಮಚ್ಚಂಡ ಅಶೋಕ್ ಹಾಗೂ ಸಿ.ಬಿ.ಸುರೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಿ.ಬಿ.ಸುರೇಶ್ ಶೆಟ್ಟಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ದೊರೆಯುತ್ತಿದೆ. ಈ ಶಾಲೆಯಲ್ಲಿ ಅತ್ಯುತ್ತಮ ಪರಿಸರದ ನಡುವೆ ಉತ್ತಮ ಬೋಧನಾ ಕೌಶಲ ಹೊಂದಿರುವ ಶಿಕ್ಷಕರು, ಗ್ರಂಥಾಲಯ, ಪ್ರಯೋಗಾಲಯ, ಸಹಪಠ್ಯ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಗ್ರಾಮೀಣ ಭಾಗದ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಂದ ಭಾಷಣ, ಸಮೂಹ ಗೀತ ಗಾಯನ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯೋಗೇಶ್, ಪ್ರಾಂಶುಪಾಲ ಉಮೇಶ್ ಕುಮಾರ್, ಪ್ರೌಢಶಾಲಾ ಮುಖ್ಯಶಿಕ್ಷಕ ಎಂ.ಎಂ.ಯಶವಂತ ಕುಮಾರ್, ಸೋಮವಾರಪೇಟೆ ಲಯನ್ಸ್ ಸಂಸ್ಥೆ ಅಧ್ಯಕ್ಷ ಎ.ಎಸ್.ಮಹೇಶ್ ಇದ್ದರು.