ಮಡಿಕೇರಿ ಕೋಟೆ ಆವರಣದ ಅರಮನೆ ಮಂದ್‌ನಲ್ಲಿ ಹುತ್ತರಿ (ಪುತ್ತರಿ) ಅಂಗವಾಗಿ ಏರ್ಪಡಿಸಿದ್ದ ಕೋಲಾಟ ಕಾರ್ಯಕ್ರಮವನ್ನು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ಅಪ್ಪನೆರವಂಡ ಚುಮ್ಮಿ ದೇವಯ್ಯ, ರಮೇಶ್ ಹೊಳ್ಳ, ದೇವರಾಜ್, ನಾಪಂಡ ರವಿ ಕಾಳಪ್ಪ, ಪಾಂಡೀರ ಮಣಿ ಕಾಳಪ್ಪ, ಪಾಂಡೀರ ರಂಜು ಅಯ್ಯಣ್ಣ ಮತ್ತಿತರರು ಇದ್ದರು. 
ಕೊಡಗು

ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ ಪುತ್ತರಿ ಕೋಲಾಟ

ಮಡಿಕೇರಿ:
ಕೊಡವರ ಆಚಾರ, ವಿಚಾರ, ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಮುಂದಿನ ಪೀಳಿಗೆಗೂ ಮುಂದುವರಿದುಕೊAಡು ಹೋಗಲಿ ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಆಶಯ ವ್ಯಕ್ತಪಡಿಸಿದರು. ಹಿಂದು ಧಾರ್ಮಿಕ ಮತ್ತು ದತ್ತಿ ಇಲಾಖೆ, ಓಂಕಾರೇಶ್ವರ ದೇವಾಲಯ ಸಮಿತಿ, ಮಡಿಕೇರಿ ಕೊಡವ ಸಮಾಜ ಹಾಗೂ ದೇಶ ತಕ್ಕ ಹೆಬ್ಬಟಗೇರಿಯ ಪಾಂಡೀರ ಕುಟುಂಬಸ್ಥರ ವತಿಯಿಂದ ಇಲ್ಲಿನ ಕೋಟೆ ಆವರಣದ ಅರಮನೆ ಮಂದ್‌ನಲ್ಲಿ ಹುತ್ತರಿ (ಪುತ್ತರಿ) ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಕೋಲಾಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಡಿಕೇರಿ ಕೋಟೆ ಆವರಣದಲ್ಲಿ ನಡೆಯುವ ಕೋಲಾಟಕ್ಕೆ ಐತಿಹಾಸಿಕ ಮಹತ್ವ ಇದೆ. ಕೊಡಗನ್ನು ರಾಜರು ಆಳುವುದಕ್ಕೂ ಮೊದಲು ಇಲ್ಲಿ ಹುತ್ತರಿ ಕೋಲಾಟದ ಸಂಪ್ರದಾಯ ಇತ್ತು. ಹಿಂದಿನ ಪದ್ಧತಿ, ಆಚಾರ, ವಿಚಾರಗಳಿಗೆ ಅನುಗುಣವಾಗಿ ಮಡಿಕೇರಿ ನಗರದಲ್ಲಿ ಈಗಲೂ ಹುತ್ತರಿ ಕೋಲಾಟ ಮುಂದುವರಿಸಿಕೊAಡು ಹೋಗುತ್ತಿರುವುದು ಸ್ವಾಗತಾರ್ಹ. ಮಡಿಕೇರಿ ಕೊಡವ ಸಮಾಜ ಕೂಡ ಈ ಕಾರ್ಯಕ್ರಮಕ್ಕೆ ಉತ್ತಮ ಸಹಕಾರ ಕೊಡುತ್ತಿದೆ. ಇಲ್ಲಿ ಕೋಲಾಟ ಕಾರ್ಯಕ್ರಮ ಆಯೋಜಿಸುವ ಪಾಂಡೀರ ಕುಟುಂಬಕ್ಕೆ ಈಗ ಕೊಡಲಾಗುತ್ತಿರುವ ಮಂದ್ ಮರ್ಯಾದಿ ಗೌರವಧನ ಹೆಚ್ಚಿಸಬೇಕು ಎಂದರು.
ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಅಪ್ಪನೆರವಂಡ ಚುಮ್ಮಿ ದೇವಯ್ಯ ಮಾತನಾಡಿ ರಾಜರ ಆಡಳಿತಾವಧಿಯಲ್ಲಿ ಕೋಟೆ ಆವರಣದಲ್ಲಿ ನಡೆಯುತ್ತಿದ್ದ ಹುತ್ತರಿ ಕೋಲಾಟ ನಂತರ ಬ್ರಿಟಿಷರ ಕಾಲದಲ್ಲಿ ಗದ್ದಿಗೆ ಭಾಗದಲ್ಲಿ ಏರ್ಪಾಡು ಮಾಡಲಾಗುತ್ತಿತ್ತು. ಕೆ.ಜಿ. ಬೋಪಯ್ಯ ಶಾಸಕರಾಗಿ, ರಮೇಶ್ ಹೊಳ್ಳ ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭ ಮತ್ತೆ ಅರಮನೆ ಆವರಣದಲ್ಲಿ ಈ ಕಾರ್ಯಕ್ರಮ ಶುರುಮಾಡಿರುವುದು ಶ್ಲಾಘನೀಯ.
ಕೊಡವರ ಶ್ರೀಮಂತ ಸಂಸ್ಕೃತಿ ಉಳಿಸಿ ಬೆಳೆಸುವ ಪಾಂಡೀರ ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಓಂಕಾರೇಶ್ವರ ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಸಿಇಒ ದೇವರಾಜ್, ಸಹಕಾರಿ ಧುರೀಣ ನಾಪಂಡ ರವಿ ಕಾಳಪ್ಪ, ಪಾಂಡೀರ ಕುಟುಂಬದ ಪ್ರಮುಖರಾದ ಪಾಂಡೀರ ಮಣಿ ಕಾಳಪ್ಪ, ಪಾಂಡೀರ ರಂಜು ಅಯ್ಯಣ್ಣ ಮಡಿಕೇರಿ ಕೊಡವ ಸಮಾಜದ ಪ್ರಮುಖರು, ಚೆಟ್ಟೀರ ಕುಟುಂಬಸ್ಥರು ಈ ಸಂದರ್ಭ ಇದ್ದರು.
ಗುರುವಾರ ರಾತ್ರಿ ಆಚರಿಸಲಾದ ಹುತ್ತರಿ (ಪುತ್ತರಿ) ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಮಡಿಕೇರಿ ಅರಮನೆ ಮಂದ್‌ನಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ಕೋಲಾಟ ಕಾರ್ಯಕ್ರಮ ಜನಮನ ಸೆಳೆಯಿತು. ಪಾಂಡೀರ ಮತ್ತು ಚೆಟ್ಟೀರ ಕುಟುಂಬಸ್ಥರು ಮಾತ್ರವಲ್ಲದೆ ನಗರದ ನಿವಾಸಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರವಾಸಿಗರು ಕೊಡವರ ಈ ಶ್ರೀಮಂತ ಸಂಸ್ಕೃತಿಯನ್ನು ಕಣ್ತುಂಬಿಸಿಕೊAಡರು. ಪಾಂಡೀರ ಕುಟುಂಬಸ್ಥರು ಕೋಲಾಟ, ಉಮ್ಮತಾಟ್ ಹಾಗೂ ಬೊಳಕಾಟ್ ಪ್ರದರ್ಶನ ನೀಡಿದರೆ, ಮಡಿಕೇರಿ ಕೊಡವ ಸಮಾಜದ ವತಿಯಿಂದ ಕೋಲಾಟ, ಉಮ್ಮತಾಟ್, ಬೊಳಕಾಟ್ ಹಾಗೂ ಸಮರ ಕಲೆಯನ್ನು ಪ್ರತಿಬಿಂಬಿಸುವ ಪರೆಯಕಳಿ ಸೇರಿದ್ದವರನ್ನು ಆಕರ್ಷಿಸಿತು. ಕಾರ್ಯಕ್ರಮದ ಆರಂಭದಲ್ಲಿ ಪಾಂಡೀರ ಶ್ರೇಯಾ ಅಯ್ಯಣ್ಣ ಪ್ರಸ್ತುತಪಡಿಸಿದ ಕೊಡವ ಭಾಷೆಯ ಪ್ರಾರ್ಥನಾ ಗೀತೆ ಗಮನ ಸೆಳೆಯಿತು.
"

ನಮ್ಮ ಕುಟುಂಬದವರು ಅರಮನೆ ಮಂದ್‌ನಲ್ಲಿ ಪ್ರಸ್ತುತಪಡಿಸುವ ಪುತ್ತರಿ ಕೋಲಾಟಕ್ಕೆ ಐತಿಹಾಸಿಕ ಮಹತ್ವ ಇದೆ. ಕೊಡಗನ್ನು ರಾಜರು ಆಳುತ್ತಿದ್ದ ಕಾಲದಲ್ಲೂ ನಮ್ಮ ಕುಟುಂಬಸ್ಥರು ಈ ಜಾಗದಲ್ಲಿ ಪುತ್ತರಿ ಕೋಲಾಟ ಪ್ರದರ್ಶನ ಮಾಡುತ್ತಿದ್ದರು. ಆ ಸಂಪ್ರದಾಯವನ್ನು ಈಗಲೂ ನಾವು ಮುಂದುವರಿಸಿಕೊAಡು ಹೋಗುತ್ತಿರುವುದಕ್ಕೆ ಹೆಮ್ಮೆ ಇದೆ. ನಮ್ಮ ಕುಟುಂಬದ ಎಲ್ಲರೂ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತೇವೆ.