ಡಾ.ಸತೀಶ್ ಕುಮಾರ್ 
ಕೊಡಗು

ಡಿ.೨೧ ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ

ಆದರ್ಶ್. ಎಂ.ಕೆ.

ಪ್ರಮುಖ ಮುಖ್ಯಾಂಶಗಳು

  • ಡಿ.೨೧ ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ
ಮಡಿಕೇರಿ: ಡಿ.೨೧ ರಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ೦ ತಿಂಗಳಿನಿಂದ ೫ ವರ್ಷದ ಒಳಗಿನ ಒಟ್ಟು ೩೨,೭೦೨ ಮಕ್ಕಳಿದ್ದು, ನಗರ ವ್ಯಾಪ್ತಿಯಲ್ಲಿ ೩,೨೭೫ ಗ್ರಾಮೀಣ ವ್ಯಾಪ್ತಿಯಲ್ಲಿ ೨೯,೪೨೭ ಮಕ್ಕಳಿರುತ್ತಾರೆ. ಇವರಲ್ಲಿ ಸ್ಥಿರವಾಸಿತ ವಲಸೆ ಒಟ್ಟು ೧೫,೭೮೮ ಮಕ್ಕಳು, ವಲಸೆ ಕಾರ್ಮಿಕರ ೪,೧೧೨ ಮಕ್ಕಳು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು ೪೭೦ ಬೂತ್, ೩೨ ಸಂಚಾರಿ ಬೂತ್, ಒಂದು ಸಂಚಾರಿ ಬೂತ್‌ನ್ನು ಮಾಡಲಾಗಿದೆ. ಬೂತ್‌ಗಳಲ್ಲಿ ಲಸಿಕೆ ನೀಡಲು ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡವನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೧,೩೬,೨೧೪ ಮನೆ ಗುರುತಿಸಲಾಗಿದೆ. ಈ ಮನೆಗಳಿಗೆ ಭೇಟಿ ನೀಡಿ ಬಿಟ್ಟು ಹೋಗಿರುವ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಶಿಕ್ಷಣ ಇಲಾಖೆಯಿಂದ ಪ್ರಾರ್ಥನೆ ಸಮಯದಲ್ಲಿ ತಮ್ಮ ಸಮೀಪದ ಮನೆಯಲ್ಲಿ ೩ ತಿಂಗಳಿಂದ ೬ ವರ್ಷದ ಒಳಗಿನ ಮಕ್ಕಳಿರುವ ಮನೆಗಳಿಗೆ ಪೋಲಿಯೋ ಲಸಿಕೆ ಹಾಕಿಸಲು ತಿಳಿಸುವುದು, ಹಾಗೂ ಮಕ್ಕಳ ಮೂಲಕ ನಗರ ಪ್ರದೇಶದಲ್ಲಿ ಜಾಥ ನಡೆಸಲು ತಿಳಿಸಲಾಗಿದೆ. ಬೂತ್ ಮಾಡಿರುವ ಶಾಲೆಯನ್ನು ಬೆಳಿಗ್ಗೆ ೮ ಗಂಟೆಗೆ ತೆರೆದು ಲಸಿಕೆ ನೀಡಲು ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾಫಿ ಕುಯ್ಲು ಮಾಡುವ ಸಮಯವಾಗಿರುವುದರಿಂದ ತೋಟಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಬರುವುದರಿಂದ ಎಲ್ಲಾ ತೋಟ ಮಾಲೀಕರು ತಮ್ಮ ಲೈನ್ ಮನೆಗಳಲ್ಲಿರುವ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಬೇಕಿದೆ. ಈ ಬಗ್ಗೆ ಬೆಳೆಗಾರರ ಸಂಘದ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ತಮ್ಮ ಮನೆಗೆ ಬರುವ ಅರೋಗ್ಯ ಕಾರ್ಯಕರ್ತರಿಗೆ ತಮ್ಮ ಲೈನ್ ಮನೆಯಲ್ಲಿರುವ ೦ ಯಿಂದ ೫ ವರ್ಷದೊಳಗಿನ ಮಕ್ಕಳಿಗೆ ನೀಡಿರುವ ಬಗ್ಗೆ ಮಾಹಿತಿಯನ್ನು ನೀಡ ಬೇಕಾಗಿದೆ ಎಂದು ವಿವರಿಸಿದ್ದಾರೆ.
ಜಿಲ್ಲಾ ಸಾರಿಗೆ ಅಧಿಕಾರಿಗಳಿಂದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸುಮಾರು ೮೫ ವಾಹನಗಳ ಅವಶ್ಯಕತೆ ಇದ್ದು, ಈ ದಿನದಂದು ವಾಹನ ಒದಗಿಸಿಕೊಡಲು ತಿಳಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಾರಿಗೆ ಅಧಿಕಾರಿಗಳು, ೫೫ ವಾಹನ ಒದಗಿಸಿದ್ದಾರೆ. ರಕ್ಷಣಾ ಇಲಾಖೆಯಿಂದ ಪ್ರವಾಸೋದ್ಯಮ ಸ್ಥಳಗಳಲ್ಲಿ ಸಂಚಾರಿ ಬೂತ್ ಗಳಿರುವ ಕಡೆ ಮತ್ತು ಜಿಲ್ಲೆಗೆ ಪ್ರವೇಶ ಒದಗಿಸುವ ಚೆಕ್ ಪೋಸ್ಟ್‌ಗಳಲ್ಲಿ ಸಂಚಾರಿ ಘಟಕ ತೆರೆಯಲಾಗಿದೆ. ಈ ಸ್ಥಳದಲ್ಲಿ ೩ ತಿಂಗಳಿಂದ ೫ ವರ್ಷದೊಳಗಿನ ಮಕ್ಕಳು ಕಂಡು ಬಂದಲ್ಲಿ ಲಸಿಕೆ ಹಾಕಿಸಲು ಸಹಕರಿಸುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ, ಮಕ್ಕಳಿಗೆ ಕಡ್ಡಾಯ ಲಸಿಕೆಯನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.